ಕಾರವಾರ: ಜಗತ್ತಿನಾದ್ಯಂತ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿದ್ದು, ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವೈಜ್ಞಾನಿಕ ಕ್ಷೇತ್ರದಲ್ಲಿ ಇಂದು ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಈಶ್ವರ ನಾಯ್ಕ ಹೇಳಿದರು.
ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 30ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಸಂಶೋಧಕರಿಗೆ ಧರ್ಮ ವಿರೋಧಿ ಪಟ್ಟ ಕಟ್ಟಿ ಶಿಕ್ಷಿಸುತ್ತಿದ್ದರು. ಆದರೆ ಇಂದು ವೈಜ್ಞಾನಿಕ ಆವಿಷ್ಕಾರಗಳಿಗೆ ಸಾಕಷ್ಟು ಅವಕಾಶಗಳಿದ್ದು, ಇಂಥ ವೈಜ್ಞಾನಿಕ ಸಮಾವೇಶಗಳು ಯುವ ವಿಜ್ಞಾನಿಗಳಾಗಿ ರೂಪಿಸಲು ಪ್ರಶಸ್ತ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ವಹಿಸಿ ಮಾತನಾಡಿದರು. ಪರಿಸರ ತಜ್ಞ ಮಹಾಬಳೇಶ್ವರ ಹೆಗಡೆ, ನಿವೃತ್ತ ಮುಖ್ಯಾಪಾಧ್ಯಕ ರಾಜೇಂದ್ರ ನಾಯಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಕ.ರಾ.ವಿ.ಪ. ಜಿಲ್ಲಾ ಸಂಚಾಲಕ ಸುಧೀರ ಡಿ.ನಾಯಕ ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಕ.ರಾ.ವಿ.ಪ. ಶೈಕ್ಷಣಿಕ ಸಂಯೋಜಕ ರಾಜಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು. ಹಿರೇಗುತ್ತಿ ಸೆಕೆಂಡರಿ ಸ್ಕೂಲ್ ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಎಲ್ಲರನ್ನು ವಂದಿಸಿದರು. ಮುಕ್ತಾಯ ಸಮಾರಂಭದಲ್ಲಿ ಕ.ರಾ.ವಿ.ಪ. ಕಾರವಾರ ಅಧ್ಯಕ್ಷ ಡಾ.ವಿ.ಎನ್.ನಾಯಕ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಜೀವ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ ಎಂಬ ವಿಷಯದ ಮೇಲೆ ಗ್ರಾಮೀಣ ಹಾಗೂ ನಗರ ವಲಯದಿಂದ 19 ವಿದ್ಯಾರ್ಥಿಗಳ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಅದರಲ್ಲಿ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶಕ್ಕೆ ಗ್ರಾಮೀಣ ಹಿರಿಯರ ವಿಭಾಗದಿಂದ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ಸಾನಿಕಾ ಜೆ.ನಾಯ್ಕ, ಸಿವಿಎಸ್‌ಕೆ ಹೈಸ್ಕೂಲ್ ಕುಮಲ್ದ ಪ್ರಥಮ ಎಮ್.ಗೌಡ, ಗ್ರಾಮೀಣ ಕಿರಿಯರ ವಿಭಾಗದಲ್ಲಿ ಸಿವಿಎಸ್‌ಕೆ ಹೈಸ್ಕೂಲ್ ಕುಮಟಾದ ಸ್ನೇಹಾ ಯು.ನಾಯ್ಕ, ಎಚ್.ಪಿ.ಎಸ್. ನಂದೊಳ್ಳಿ ಯಲ್ಲಾಪುರದ ಸುಮನ ಭಟ್ ಆಯ್ಕೆಯಾಗಿದ್ದಾರೆ.
ನಗರ ಹಿರಿಯರ ವಿಭಾಗದಿಂದ ಸರಕಾರಿ ಪ್ರೌಢಶಾಲೆ ಗಣೇಶನಗರ ಶಿರಸಿಯ ಸಮಯ ಮಹಾಲೆ, ನ್ಯೂ ಇಂಗ್ಲೀಷ್ ಹೈಸ್ಕೂಲ್ ಹೊನ್ನಾವರದ ಸತ್ಯಪ್ರಸಾದ ಎಮ್.ಪ್ರಭು, ದೀಕ್ಷಾ ಎಲ್.ನಾಯ್ಕ, ನಗರ ಕಿರಿಯರ ವಿಭಾಗದಿಂದ ಸರಕಾರಿ ಪ್ರೌಢಶಾಲೆ ಕೇಣಿಯ ಅಕ್ಷರಾ ಮಹಾಲೆ, ಸರಕಾರಿ ಪ್ರೌಢಶಾಲೆ ಗಣೇಶನಗರದ ದರ್ಶನ ಬಾಗೇವಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.