ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬವಾದ ಜಾಂಬೂರಿಯಲ್ಲಿ ಭಾಗವಹಿಸಿದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಜ ರಂದು ಪುರಸ್ಕರಿಸಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಡಿ. 21 ರಿಂದ ಡಿ. 26 ರವರೆಗೆ ಆಯೋಜಿಸಲಾಗಿದ್ದ ಜಾಂಬೂರಿಯಲ್ಲಿ ಲಯನ್ಸ್ ಶಾಲೆಯ 20 ಗೈಡ್ಸ್ ವಿದ್ಯಾರ್ಥಿನಿಯರು ಮತ್ತು 18 ಸ್ಕೌಟ್ಸ್ ವಿದ್ಯಾರ್ಥಿಗಳು ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಮತ್ತು ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ಇವರ ನೇತೃತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ದೇಶದ ಸಾವಿರಾರು ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್, ವಿದ್ಯಾರ್ಥಿಗಳು ಮತ್ತು ಘಟಕದ ನಾಯಕರು ಮತ್ತು ವಿದೇಶಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದ ಈ ವಿಶಿಷ್ಟ ವಿಶೇಷ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಲಯನ್ಸ್ ವಿದ್ಯಾರ್ಥಿಗಳು ಕೂಡ ಸಾಕ್ಷಿಭೂತರಾಗಿದ್ದದ್ದು ನಮಗೆ ಹೆಮ್ಮೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸಂತಸವನ್ನು ಹಂಚಿಕೊಂಡರು.
ಗೈಡ್ಸ್ ಜಿಲ್ಲಾ ಆಯುಕ್ತರಾದ ಎಂಜೆಎಫ್ ಲಯನ್ ಜ್ಯೋತಿ ಭಟ್ ಮಾತನಾಡುತ್ತಾ ಜಾಂಬೂರಿಯ ಹಿನ್ನೆಲೆ ಈ ಸಾಂಸ್ಕೃತಿಕ ಹಬ್ಬಕ್ಕೆ ನಡೆಸಿದ ಪೂರ್ವ ತಯಾರಿಗಳು ಮತ್ತು ಅಲ್ಲಿನ ಇನ್ನೂ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲ.ಎನ್.ವಿ.ಜಿ ಭಟ್, ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಯನ್ ಪ್ರೊಫೆಸರ್ ರವಿ ನಾಯಕ್ , ಶಿರಸಿ ಲಯನ್ಸ್ ಕ್ಲಬ್ ಪ್ರಸ್ತುತ ಅಧ್ಯಕ್ಷ ಲ. ತ್ರಿವಿಕ್ರಮ್ ಪಟವರ್ಧನ್, ಕಾರ್ಯದರ್ಶಿಗಳಾದ ಎಂ.ಜೆ.ಎಫ್. ಲ. ರಮಾ ಪಟವರ್ಧನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ದೇಶಕರಾದ ಲ. ಅಶೋಕ್ ಹೆಗಡೆ ,ಲ. ಜ್ಯೋತಿ ಅಶ್ವಥ್ ಹೆಗಡೆ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ್ ಹೆಗಡೆ ಪ್ರಾರ್ಥನೆ ಗೀತೆ ಹಾಡಿದರು. ಸಹ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಶ್ರೀಮತಿ ಅನಿತಾ ಭಟ್ ವಂದನಾರ್ಪಣೆ ನಿರ್ವಹಿಸಿದರು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.