ಸಿದ್ದಾಪುರ: ತಾಯಿ ತನ್ನ ಎಲ್ಲ ಅಕ್ಕರೆ ನೀಡಿ ಸಾಕಿರುತ್ತಾಳೆ. ತಂದೆ- ತಾಯಿಗಳ ಪ್ರೀತಿ ಅಪಾರವಾದದ್ದು. ಅವರ ಮೊಗದಲ್ಲಿ ಸಂತಸ ಇರುವಂತಹ ಕಾರ್ಯ ಮಾಡುವುದು ಮಕ್ಕಳ ಜವಾಬ್ದಾರಿ. ತಾಯಿಯ ಮೊಗದಲ್ಲಿ ನಗು ಅರಳಿಸುವ ಕಾರ್ಯ ಮಾಡುವಲ್ಲಿ ಮಕ್ಕಳ ಸಾಫಲ್ಯತೆ ಇರುತ್ತದೆ ಎಂದು ಪ್ರೊಫೆಸರ್ ಕೆ.ಎ.ಭಟ್ಟ ಹೇಳಿದರು.
ಅವರು ಪಟ್ಟಣದ ಹಾಳದಕಟ್ಟಾ ಮುರುಘ ರಾಜೇಂದ್ರ ಶಾಲೆಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಮುರುಘರಾಜೇಂದ್ರ ಅಂಧರ ಶಾಲೆಯ ಮಕ್ಕಳಿಗೆ ಹೊಸ ವರ್ಷದ ಅಂಗವಾಗಿ ಮಕ್ಕಳಿಗೆ ಹಣ್ಣು ಹಾಲು ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತಾಡುತ್ತಿದ್ದರು. ಮಕ್ಕಳ ಒಳ್ಳೆಯ ಗುಣಗಳು ಅವರಿಗೆ ಸಂತಸವನ್ನುoಟು ಮಾಡುತ್ತವೆ ಎಂದರು.
ಅತಿಥಿಗಳಾದ ಸಾಹಿತಿ ಆರ್.ಕೆ. ಹೊನ್ನೆಗುಂಡಿಯವರು ನಮ್ಮ ಸಂಸ್ಕೃತಿಯಲ್ಲಿ ಸೇವಾ ಮನೋಭಾವ ಸೇರಿಕೊಂಡೇ ಬಂದಿದೆ. ಇಂತಹ ಸೇವಾ ಕಾರ್ಯ ಮನಸ್ಸಿಗೆ ಹಾಗೂ ಸಮಾಜಕ್ಕೆ ನೆಮ್ಮದಿ ತರುತ್ತದೆ ಅಂದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ತಮ್ಮಣ್ಣ ಬೀಗಾರ ತೊಂದರೆಗೆ ಒಳಗಾದವರಿಗೆ ಕೇವಲ ಕರುಣೆ ತೋರಿದರೆ ಸಾಲದು. ಹೃದಯಪೂರ್ವಕವಾಗಿ ಪ್ರೀತಿ ಅವರ ಬಗ್ಗೆ ನಮ್ಮಲ್ಲಿರಬೇಕು ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರು, ಸಮಾರಂಭದ ಅಧ್ಯಕ್ಷರೂ ಆದ ಸಿ.ಎಸ್. ಗೌಡರ್ ಅವರು ಮಾತಾಡುತ್ತಾ ನಾವು ನಿವೃತ್ತರು ಸದಾ ಚಟುವಟಿಕೆಯಿಂದ ಇದ್ದು, ಓದು ಹಾಗೂ ಸೇವಾಕಾರ್ಯ ಮುಂತಾದವುಗಳಲ್ಲಿ ನಿರತರಾಗಿದ್ದರೆ ಆರೋಗ್ಯವಾಗಿ ಇರುತ್ತೇವೆ ಎಂದರು.
ಪ್ರೊ.ಕೆ.ಎ.ಭಟ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಂಧ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಸುಶ್ರಾವ್ಯವಾಗಿ ಹಾಡಿದರು. ಕೆ.ಎ. ಭಟ್ ಹಾಗೂ ಆರ್.ಕೆ. ಹೊನ್ನೇಗುಂಡಿ ಅವರೂ ಹಾಡು ಹೇಳಿ ಎಲ್ಲರನ್ನೂ ಖುಷಿಗೊಳಿಸಿದರು. ಸಂಘದ ಉಪಾಧ್ಯಕ್ಷರಾದ ಎನ್.ವಿ. ಹೆಗಡೆ ಅವರು ಮಾತನಾಡಿದರು. ಎಲ್ಲರಿಗೂ ಹಾಲು ಹಣ್ಣು ವಿತರಿಸಲಾಯಿತು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ವಾಸುದೇವ್ ಶೇಟ್ ಅವರು ಸ್ವಾಗತಿಸಿ ನಿರ್ವಹಿಸಿದರು. ನಿವೃತ್ತ ಶಿಕ್ಷಣ ಸಂಯೋಜಕರಾದ ಜೆ.ಎಂ. ಕುಮಟಾಕರ್ ಅವರು ವಂದಿಸಿದರು.