Slide
Slide
Slide
previous arrow
next arrow

ಅರಣ್ಯ ಭೂಮಿ ಹಕ್ಕು ನೀಡಿ ನಿಮ್ಮ ಪ್ರತಾಪ ತೋರಿಸಿ: ಶಾಂತಾರಾಮ ನಾಯಕ

300x250 AD

ಅಂಕೋಲಾ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಹಕ್ಕು ಕೊಡಿಸುವ ಪ್ರಮುಖ ಜವಾಬ್ದಾರಿ ಹೊಂದಿರುವ ಆಡಳಿತ ಪಕ್ಷದ ಮುಖಂಡರುಗಳು ಅನಾವಶ್ಯಕವಾಗಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವುದು ತೀವೃ ಖಂಡನೀಯವಾದುದ್ದು. ನಿಮ್ಮ ಪ್ರತಾಪವನ್ನು ಬಡ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಿ ತೋರಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಸವಾಲು ಹಾಕಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದೇ, ಅರಣ್ಯ ಹಕ್ಕು ಕ್ಲೇಮುಗಳನ್ನು ವಿಚಾರಣೆ ನಡೆಸದೇ, ಸಾರಾಸಗಟಾಗಿ ತಿರಸ್ಕರಿಸಿದ ಅರ್ಜಿಗಳನ್ನು ಗಮನಿಸದೇ, ಸುಪ್ರೀಂ ಕೋರ್ಟಿನಲ್ಲಿರುವ ಕೇಸಿಗೆ ಬಡ ಅರಣ್ಯ ಅತಿಕ್ರಮಣದಾರರ ಪರವಾಗಿ ಅಫಿಡೆವೆಟ್ ಸಲ್ಲಿಸಲು ಇಚ್ಛಾಶಕ್ತಿ ತೋರಿಸಲು ವಿಫಲವಾಗಿ ಈಗ ಹೋರಾಟಗಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಆಡಳಿತ ಪಕ್ಷದವರು ವಿಧಾನಸಭೆಯಲ್ಲಿ ಬರೀ ಚರ್ಚೆ ಮಾಡಿ ಕಾಲಹರಣ ಮಾಡಿರುವುದನ್ನು ಕಂಡಿದ್ದೇವೆ. ಯಾವ ಮಂತ್ರಿಯೂ ಹಕ್ಕುಪತ್ರ ನೀಡುವ ಬಗ್ಗೆ ವಾಗ್ದಾನ ನೀಡಿಲ್ಲ. ಸಭಾಧ್ಯಕ್ಷರು ಸಹ ತೀರ್ಮಾನ ಕೊಡಿಸುವಲ್ಲಿ ಸಫಲರಾಗದೇ ಇರುವುದು ಕಳವಳಕಾರಿ ವಿಷಯವಾಗಿದೆ ಎಂದಿದ್ದಾರೆ.
2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಲು ಬಂದು ಜಾರಿಗಾಗಿ ನೂರಾರು ಬೇರೆ ಬೇರೆ ಹಂತದ ಅರಣ್ಯಭೂಮಿ ಒತ್ತುವರಿದಾರರ ಹೋರಾಟಗಳು ಇಷ್ಟು ಸುದೀರ್ಘ ಅವಧಿಯಲ್ಲಿ ನಡೆದರೂ ಅರಣ್ಯವಾಸಿಗಳ ಹಿತದೃಷ್ಠಿಯಿಂದ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಹಕ್ಕುಪತ್ರ ಕೊಡಲು ದೃಢವಾದ ತೀರ್ಮಾನ ಪ್ರಕಟಿಸುತ್ತಿಲ್ಲ. ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯವಾಸಿಗಳು ಅರಣ್ಯಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿ 85 ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿ ಮೇಲೆ ಅವಲಂಬಿಸಿದ ಕುಟುಂಬಗಳಿದ್ದು, ಅವರ ಹಿತರಕ್ಷಣೆಗೆ ಆಡಳಿತ ಪಕ್ಷದ ಮುಖಂಡರು ಬರುತ್ತಿಲ್ಲ. ನಿಯಮಗಳನ್ನು ಸರಳೀಕರಣಗೊಳಿಸಿ ಸಕ್ರಮಗೊಳಿಸುವ ಇಚ್ಛಾಶಕ್ತಿಯನ್ನು ಸರಕಾರ ತೋರಿಸದೇ ಇದ್ದಾಗ ಬೀದಿಗೆ ಇಳಿದು ಪ್ರತಭಟಿಸುವ ನೈತಿಕತೆಯೂ ಇವರಿಗೆ ಇಲ್ಲವಾಗಿದೆ. ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡದೇ ಆರೋಪ ಮಾಡುತ್ತಿರುವುದು ಒಪ್ಪುವಂಥದಲ್ಲ ಎಂದಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಕೇಂದ್ರ ಸಂಘಟನೆಯಾದ ಅಖಿಲ ಭಾರತ ಕಿಸಾನ್ ಸಭಾ ಸುಪ್ರೀಂ ಕೋರ್ಟಿನಲ್ಲಿ ಅಫಿಡಿವೆಟ್ ಸಲ್ಲಿಸಿ ಪ್ರತಿವಾದಿಯಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ತ್ರಿಪುರಾ ರಾಜ್ಯವನ್ನು ಹೊರತು ಪಡಿಸಿ ಎಲ್ಲ ಕಡೆ ಅರಣ್ಯವಾಸಿಗಳನ್ನು ಅತಂತ್ರದಲ್ಲಿ ಇಡಲಾಗಿದೆ. ಡಬಲ್ ಇಂಜಿನ್ ಸರಕಾರ ಅರಣ್ಯವಾಸಿಗಳ ಹಿತರಕ್ಷಣೆ ಕಾಪಾಡಲು ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡು ಹಕ್ಕುಪತ್ರವನ್ನು ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಒತ್ತಾಯಿಸುತ್ತದೆ. ಹಕ್ಕುಪತ್ರ ನೀಡುವ ವಿಷಯಕ್ಕೆ ಸಂಬoಧಿಸಿ, ಆಡಳಿತ ಮತ್ತು ವಿರೋಧ ಪಕ್ಷಗಳು ಲಾಭ-ನಷ್ಟದ ರಾಜಕೀಯ ಲೆಕ್ಕಾಚಾರ ಮಾಡದೇ ಸೂಕ್ತ ನಿರ್ಣಯ ಒಗ್ಗಟ್ಟಿನಿಂದ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top