ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹೊಸ ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಭಾರತೀಯ ಕೋಸ್ಟ್ಗಾರ್ಡ್ನ ಕರ್ನಾಟಕದ ಕಮಾಂಡರ್ ಡಿಐಜಿ ಪ್ರವೀಣ್‌ಕುಮಾರ್ ಮಿಶ್ರಾ ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ, ಮೀನುಗಾರ ಸಮುದಾಯದ ಮುಖಂಡರ ಜೊತೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದರು. ರಾಜ್ಯದ ಕರಾವಳಿಯುವ 320 ಕಿ.ಮೀ ಉದ್ದವಿದ್ದು, ಸದ್ಯ ಸುರತ್ಕಲ್ ಹಾಗೂ ಭಟ್ಕಳದಲ್ಲಿ ರಾಡಾರ್‌ಗಳಿವೆ. ದೋಣಿಗಳ ಚಲನವಲನದ ಮೇಲೆ ಪೂರ್ಣ ಪ್ರಮಾಣದಲ್ಲಿ ನಿಗಾ ಇಡಲು ಇವು ಸಾಲುತ್ತಿಲ್ಲ. ಹಾಗಾಗಿ ಮತ್ತೆರಡು ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ರಾಡಾರ್ ಸಮುದ್ರದಲ್ಲಿ 30 ನಾಟಿಕಲ್ ಮೈಲ್ ಸುತ್ತಳತೆಯಲ್ಲಿ ನಿಗಾ ಇಡಲು ನೆರವಾಗಲಿದೆ. ಇದರ ಕ್ಯಾಮೆರಾಗಳು 5ರಿಂದ 7 ನಾಟಿಕಲ್ ಮೈಲ್ ದೂರದ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲವು. ಬೇಲೇಕೇರಿಯಲ್ಲಿ ರಾಡಾರ್ ಕೇಂದ್ರ ಸ್ಥಾಪನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕುಂದಾಪುರದಲ್ಲೂ ಕಾಮಗಾರಿ ಆರಂಭವಾಗಿದೆ ಎಂದು ಅವರು ವಿವರಿಸಿದರು.
ಮುಂಬೈನಲ್ಲಿ ಉಗ್ರಗಾಮಿಗಳ ದಾಳಿ ನಡೆದ ಬಳಿಕ ಸಮುದ್ರದಲ್ಲಿ ಕಣ್ಗಾವಲು ಹೆಚ್ಚಿಸಲು ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮೀನುಗಾರರು ಸಮುದ್ರಕ್ಕೆ ಬೀಳುವ ಪ್ರಮೇಯ ಎದುರಾದರೆ ತಕ್ಷಣ ಆ ಸ್ಥಳದ ಗುರುತಿಗಾಗಿ ತೇಲುವ ವಸ್ತು (ಬೋಯ್) ಹಾಕಬೇಕು. ಇದರಿಂದ ರಕ್ಷಣಾ ಕಾರ್ಯಾಚರಣೆ ಸುಲಭವಾಗುತ್ತದೆ. ಈಜಿ ದಡ ಸೇರುವ ಪ್ರಯತ್ನಿಸುವ ಬದಲು ಸಾಧ್ಯವಾದಷ್ಟು ಹೆಚ್ಚು ಹೊತ್ತು ಸಮುದ್ರದಲ್ಲೇ ತೇಲಿಕೊಂಡಿರಲು ಗಮನವಹಿಸಬೇಕು. ಸಮುದ್ರಕ್ಕೆ ತೆರಳುವಾಗಿ ಸದಾ ಜೀವರಕ್ಷಕ ಸಾಮಗ್ರಿಗಳನ್ನು ಜೊತೆಯಲ್ಲಿ ಹೊಂದಿರಬೇಕು ಎಂದು ಮೀನುಗಾರರಿಗೆ ಪಿ.ಕೆ.ಮಿಶ್ರಾ ಸಲಹೆ ನೀಡಿದರು.
ಬೇಲೆಕೇರಿ, ಕುಂದಾಪುರದಲ್ಲಿ ರಾಡಾರ್ ಕೇಂದ್ರ: ಡಿಐಜಿ ಮಿಶ್ರಾ
