ಕಾರವಾರ: ಕುಮಟಾದ ಸಿಹಿ ಈರುಳ್ಳಿ ಬೆಳೆಯುವ ಪ್ರದೇಶ ವಿಸ್ತರಣೆಗಾಗಿ ಹಾಲಿ ಬೆಳೆಯುತ್ತಿರುವ ಪ್ರದೇಶದ ಮಣ್ಣು ಪರೀಕ್ಷೆ ನಡೆಸಿ, ಅಲ್ಲಿನ ಮಣ್ಣಿನಲ್ಲಿರುವ ವಿಶೇಷ ಗುಣವನ್ನ ಪತ್ತೆ ಹಚ್ಚಿ. ಆ ಮೂಲಕ ಸಿಹಿ ಈರುಳ್ಳಿಯನ್ನ ಹೆಚ್ಚು ಬೆಳೆಯಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಂಸದ ಅನಂತಕುಮಾರ್ ಹೆಗಡೆ ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆಗಳ ಪ್ರಗತಿ ಪರಿಶೀಲನೆಯ ವೇಳೆ ತೋಟಗಾರಿಕಾ ಇಲಾಖೆಯ ಮಾಹಿತಿ ಪಡೆದು ಅಗತ್ಯ ಸಲಹೆ- ಸೂಚನೆಗಳನ್ನ ನೀಡಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ, ಕುಮಟಾದ ಸಿಹಿ ಈರುಳ್ಳಿ ಅದೇ ಸ್ಥಳಕ್ಕೆ ಸೀಮಿತವಾಗಿರುವುದರಿಂದ ವಿಸ್ತರಣೆ ಮಾಡಲಾಗುವುದಿಲ್ಲ. ಬೇರೆ ಕಡೆ ಬೆಳೆದರೆ ಇಲ್ಲಿನ ಗುಣಮಟ್ಟದ ಈರುಳ್ಳಿಯ ಬೆಳೆ ಬರುವುದಿಲ್ಲ. ಸದ್ಯ ಐದಾರು ಪಂಚಾಯತಿಗಳಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಈ ವರ್ಷ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಈರುಳ್ಳಿ ಬೆಳೆಯುವ ಜಾಗಗಳನ್ನ ಎನ್ಎ ಲ್ಯಾಂಡ್ ಆಗಿ ಕನ್ವರ್ಟ್ ಮಾಡಿದ್ದಾರೆ. ಜೊತೆಗೆ ಲೀಸ್ ಪಡೆಯುವವರು ಕಡಿಮೆಯಾಗಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಸಂಸದ ಹೆಗಡೆ, ಹೆಚ್ಚಿನ ಜಾಗದಲ್ಲಿ ಈರುಳ್ಳಿ ಬೆಳೆಯುವಂತಾಗಲು ಸಂಘ- ಸಂಸ್ಥೆಗಳೊoದಿಗೆ ಯೋಜನೆ ರೂಪಿಸಿಕೊಳ್ಳಿ. ಕೃಷಿ ಇಲಾಖೆಯನ್ನೂ ಸೇರಿಸಿಕೊಳ್ಳಿ. ಮಣ್ಣಿನ ಪರೀಕ್ಷೆ ಮಾಡಿ ಹೆಚ್ಚುವರಿ ಎಷ್ಟು ಜಾಗಕ್ಕೆ ವಿಸ್ತರಣೆ ಮಾಡಬಹುದು ಎಂಬುದನ್ನ ನೋಡಿ. ಇಂದಿನ ತಾಂತ್ರಿಕ ಯುಗದಲ್ಲಿ ಏನು ಬೇಕಾದರೂ ಮಾಡಬಹುದು. ಇಂದಿನ ಬೆಳೆಗೆ ಹತ್ತು ಪಟ್ಟು ಬೆಳೆದರೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದು ತಿಳಿಸಿದರು.
ಜಿಲ್ಲೆಯ ಜೇನನ್ನ ಬ್ರಾಂಡ್ ಮಾಡಿ: ಪಶ್ಚಿಮಘಟ ಪ್ರದೇಶಗಲ್ಲಿ ಬರುವ ರತ್ನಾಗಿರಿ ಮತ್ತು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಪಾದಿಸುವ ಜೇನು ತುಪ್ಪ ವಿಶೇಷವಾಗಿದ್ದು, ಈ ಪ್ರದೇಶದಲ್ಲಿ ದೊರೆಯುವ ಜೇನುತುಪ್ಪ ಬೇರೆ ಯಾವ ಸ್ಥಳದಲ್ಲೂ ಸಿಗುವುದಿಲ್ಲ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ರಫ್ತು ಉತ್ಪನ್ನ ಸಮಿತಿಯಿದ್ದು, ತೋಟಗಾರಿಕೆ ಇಲಾಖೆಯಿಂದ ಯಾವೆಲ್ಲ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಿದೆ ಎಂಬುವುದನ್ನು ಗಮನಹರಿಸಿ. ಇಲ್ಲಿನ ಜೇನುತುಪ್ಪವು ಔಷಧಿಗಳ ಉತ್ಪಾದನೆಯಲ್ಲಿ ಬಳಕೆಯಾಗುವುದರಿಂದ ಇವುಗಳನ್ನ ಬ್ರಾಂಡ್ ಮಾಡಲು, ಜಿಐ ಟ್ಯಾಗ್ ಪಡೆಯಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.
ಜೇನು ಸಾಕಾಣಿಕಾ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಭಾಗಮಂಡಲದಲ್ಲಿ ಮಾತ್ರ ಇದ್ದು, ಸಿದ್ದಾಪುರದಲ್ಲಿರುವ ಕೇಂದ್ರದಲ್ಲಿ ಮುಂದಿನ ವರ್ಷದಿಂದ ತರಬೇತಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದಾಗ, ಕೇವಲ ಸಾಕಾಣಿಕೆ ಮಾತ್ರವಲ್ಲ, ಡಿಜಿಟಲ್ ತರಬೇತಿ ಕೂಡ ಕೊಡಬೇಕು. ಸಾಧ್ಯವಾದರೆ ಸಿಇಒ ಬೀಳಗಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಸೂಚಿಸಿದರು.
ಡಿಜಿಟಲ್ ಆ್ಯಪ್ ಸಿದ್ಧಪಡಿಸಿ: ಕೃಷಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆಂಬ ವರದಿ ಇದೆ. ನರೇಗಾ ಪ್ರಗತಿಯನ್ನ ಕೂಲಂಕುಷವಾಗಿ ಪರಿಶೀಲಿಸಬೇಕಿದೆ. ಕಾರ್ಮಿಕರ ಲೆಕ್ಕಾಚಾರ ಸೋರಿಕೆಯಾಗುತ್ತಿದೆ. ದಾಖಲೆಗಳನ್ನ ಹೊರತುಪಡಿಸಿ ನಿಜವಾಗಿಯೂ ಎಷ್ಟು ಕಾರ್ಮಿಕರು ನರೇಗಾದ ಸೌಲಭ್ಯ ಪಡೆಯುತ್ತಿದ್ದಾರೆಂಬುದನ್ನ ತಿಳಿಯಲು ಎನ್ಐಸಿ, ಐಟಿ ತಂಡದ ಸಹಾಯ ಪಡೆದು ಥಂಬ್ ಇಂಪ್ರೆಶನ್, ಜಿಪಿಎಸ್ ಎನೇಬಲ್ಡ್ ಆ್ಯಪ್ ಸಿದ್ಧಪಡಿಸಿ, ಕೂಲಿಕಾರರ ಡಿಜಿಟಲ್ ಸಹಿ ಪಡೆದು ಲೆಕ್ಕ ಹಾಕಲು ಕ್ರಮ ವಹಿಸಲು ಸಿಇಒಗೆ ಹೆಗಡೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ರೂಪಲಿ ನಾಯ್ಕ, ಸುನೀಲ ನಾಯ್ಕ, ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತಿ ಸಿಇಒ ಈಶ್ವರ್ ಖಂಡೂ, ಪಂಚಾಯತ್ರಾಜ್ ವಿಕೇಂದ್ರೀಕರಣ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಮಾಡದಿರೋ ಕೆಲಸಕ್ಕೆ ಜಾಹೀರಾತು ಕೊಡ್ತೀರಿ…!!!
ಆರೋಗ್ಯ ಇಲಾಖೆಯ ವರದಿ ಓದಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರದ್ ನಾಯಕ, ಯುಡಿಐಡಿಯಲ್ಲಿ 105% ಫಲಿತಾಂಶ ದಾಖಲಿಸಿದ್ದೇವೆ ಎಂದು ತಿಳಿಸಿದರು. ಎಂಡೋಸಲ್ಫಾನ್ ಪೀಡಿತರು ಹೊನ್ನಾವರ, ಭಟ್ಕಳದಲ್ಲಿ ಹೆಚ್ಚಿದ್ದು, ಅಲ್ಲಿ ಅಂಗವಿಕಲತೆ ಪ್ರಮಾಣ ಕೂಡ ಹೆಚ್ಚಿದೆ. ಆದರೆ ಐಸಿಎಂಆರ್ ವರದಿ ಬರುವವರೆಗೂ ಅವರನ್ನ ಶಂಕಿತ ಎಂಡೋಸಲ್ಫಾನ್ ಪೀಡಿತರೆಂದೇ ಪರಿಗಣಿಸಲಾಗುತ್ತದೆ ಎಂದರು.
ಆಭಾ (ಆಯುಷ್ನಾನ್ ಭಾರತ್) ಕಾರ್ಡ್ 13 ಲಕ್ಷ ಟಾರ್ಗೆಟ್ ನೀಡಿದ್ದು, ಗ್ರಾಮ ಒನ್ನಿಂದ ಮಾಡಿಸಲಾಗುತ್ತಿದೆ. ಮಾರ್ಚ್ ಒಳಗೆ ಗುರಿ ಸಾಧಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಆಭಾ ಕಾರ್ಡ್ ಪೂರೈಕೆಯು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದ್ದು, ತ್ವರಿತಗತಿಯಲ್ಲಿ ಕಾರ್ಡ್ಗಳನ್ನು ವಿತರಿಸುವ ವ್ಯವಸ್ಥೆ ಆಗಬೇಕು. ಜಿಲ್ಲೆಯಲ್ಲಿ 230 ಗ್ರಾಮ ಒನ್, 229 ಬಾಪೂಜಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಲು ಕ್ರಮ ವಹಿಸುವಂತೆ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಆಭಾದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷವರೆಗೆ ವೈದ್ಯಕೀಯ ಸೌಲಭ್ಯ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ 1.5 ಲಕ್ಷದವರೆಗೆ ವೈದ್ಯಕೀಯ ನೆರವು ಸಿಗುತ್ತದೆ. ಆದರೆ ಈ ಬಗ್ಗೆ ಹಲವರಿಗೆ ಗೊತ್ತಿಲ್ಲ. ನಾವೇ ಮೊದಲು ಎಂದು ಮಾಡದಿರುವ ಸಾಧನೆಗೆ ಫೊಟೊ ಜಾಹೀರಾತು ಹಾಕಿಕೊಳ್ತಾರೆ. ಮಾಡೋದ್ಯಾರೋ, ಪೋಸ್ ನೀಡೋದ್ಯಾರೋ. ಬೇಕಾಗಿರುವುದನ್ನ ಪ್ರಚಾರ ಮಾಡಿ ಎಂದು ಶಾಸಕಿ ರೂಪಾಲಿ ನಾಯ್ಕ ಸೂಚಿಸಿದರು.
ಅಧಿಕಾರಿಗಳಿಗೆ ವೈಜ್ಞಾನಿಕ ಪಾಠ!!
ದಿಶಾ ಅಧ್ಯಕ್ಷತೆ ವಹಿಸಿದ್ದ ಸಂಸದ ಅನಂತಕುಮಾರ ಹೆಗಡೆ, ಗಂಟೆಗಟ್ಟಲೆ ಅಧಿಕಾರಿಗಳಿಗೆ ವೈಜ್ಞಾನಿಕ ಪಾಠ ಮಾಡಿದರು. ಇಲೆಕ್ಟ್ರಾನ್ ರಿಚ್ ಎಂಬ ವಿಷಯವಾಗಿ, ಜರ್ಮನ್, ಆಸ್ಟ್ರೇಲಿಯಾದ ನೈಸರ್ಗಿಕ ಉತ್ಪನ್ನಗಳ ಬಗ್ಗೆ, ಅಲ್ಲಿರುವ ಬೇಡಿಕೆಗಳ ಬಗ್ಗೆ ಉದಾಹರಿಸುತ್ತಾ ಸಭೆಯಲ್ಲಿ ಮಾತನಾಡಿದರು. ತರಗತಿಯಲ್ಲಿ ಮಕ್ಕಳು ಶಿಕ್ಷಕರ ಪಾಠ ಕೇಳುವಂತೆ ಗಂಟೆಗಟ್ಟಲೆ ಕುಳಿತು ಅಧಿಕಾರಿಗಳು ನಿಶ್ಯಬ್ದವಾಗಿ ಸಂಸದ ಹೆಗಡೆಯವರ ವೈಜ್ಞಾನಿಕ ಪಾಠ ಕೇಳಿದರು.
ಅಡಿಕೆ ಬೆಳೆಯ ಕುರಿತು ಸರ್ಕಾರದ ನಿಲುವು ಪ್ರಶ್ನಿಸಿದ ಸಂಸದ ಹೆಗಡೆ!
ಮಲೆನಾಡಿಗರ ಆರ್ಥಿಕತೆಯ ಮೂಲವಾಗಿರುವ ಅಡಿಕೆ ಬೆಳೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ತೀವ್ರ ಚರ್ಚೆ ಶುರುವಾಗಿದ್ದು, ಸಂಸದ ಅನಂತಕುಮಾರ್ ಹೆಗಡೆ ಕೂಡ ಈ ಬಗ್ಗೆ ಮಾತನಾಡಿದರು.
ಅಡಿಕೆ ಬೆಳೆಯ ಕುರಿತು ಸಮಗ್ರ ವೈಜ್ಞಾನಿಕ ಸಂಶೋಧನೆ ನಡೆಸಿ ವರದಿ ಪಡೆಯಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಅವರು ದಿಶಾ ಸಭೆಯಲ್ಲಿ ಸೂಚಿಸಿದರು. ವರ್ಷಕ್ಕೊಮ್ಮೆ ಅಡಿಕೆ ಬೆಳೆ ನಿಷೇಧದ ಬಗ್ಗೆ ಅಲ್ಲಲ್ಲಿ ಚರ್ಚೆಗಳಾಗುತ್ತವೆ. ಇದರ ಬಗ್ಗೆ ಅಧಿಕಾರಿಗಳೇ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಈ ಬಗ್ಗೆ ಶೀಘ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿಕೊಳ್ಳಿ ಎಂದು ಸೂಚಿಸಿದರು.
ಇವತ್ತಿನ ಅಡಿಕೆ ಬೆಳೆಯುವ ಪ್ರದೇಶ ವಿಸ್ತರಣಾ ವ್ಯಾಪ್ತಿ ಎಷ್ಟಿದೆ, ಅದನ್ನ ಎಷ್ಟರ ಮಟ್ಟಿಗೆ ಅಭಿವೃದ್ಧಿಪಡಿಸಬಹುದು. ಬೆಳೆ ವಿಸ್ತರಣೆಯ ಮೇಲೆ ನಿಯಂತ್ರಣ ತರಬೇಕಾ ಹೇಗೆ ಎಂಬ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದರವಿಲ್ಲವೆಂದು ನಿಯಂತ್ರಣಾ ವ್ಯವಸ್ಥೆ ಬದಲಾವಣೆಯಾದರೆ ರೈತರೇ ಸಾಯಬೇಕಾಗುತ್ತದೆ. ಹೀಗಾಗಿ ಅಡಿಕೆಯ ಕುರಿತು ವೈಜ್ಞಾನಿಕ ಯೋಜನಾ ವರದಿ ಇದ್ದರೆ ಒಳ್ಳೆಯದು. ರಾಜ್ಯ ತೋಟಗಾರಿಕೆ ಇಲಾಖೆಯೊಂದಿಗೆ ಈ ಬಗ್ಗೆ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಎಂದರು.
ಅಡಿಕೆ ಬಗ್ಗೆ ಸರ್ಕಾರದ ವೈಜ್ಞಾನಿಕ ಧೋರಣೆ ಏನಿರಬೇಕು? ಎಂಬ ಸ್ಪಷ್ಟತೆಗೆ ಬರಬೇಕಿದೆ. ಸರ್ಕಾರಕ್ಕೆ ಈ ಬಗ್ಗೆ ಯೋಜನೆ ರೂಪಿಸಲು ಸಾಧ್ಯವಿಲ್ಲ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡಗಳಲ್ಲಿ ಮನಸ್ಸಿಗೆ ಬಂದoತೆ ಅಡಿಕೆ ಬೆಳೆಯುವ ಪ್ರÀದೇಶ ವಿಸ್ತರಣೆಯಾಗಿದೆ. ಮಾರುಕಟ್ಟೆಗೆ ಪೂರೈಕೆ ಮತ್ತು ಬೇಡಿಕೆಯ ಬಗ್ಗೆ ಸರಿಯಾದ ಅಧ್ಯಯನ ನಡೆಸಿ, ಅಡಿಕೆ ಭವಿಷ್ಯದ ಬಗ್ಗೆ ವರದಿ ತಯಾರಿಸಬೇಕು. ಒಮ್ಮೆ ಅಡಿಕೆ ನೆಟ್ಟರೆ ಫಲ ಬರಲು ಆರು ವರ್ಷ ಬೇಕು. ಆರು ವರ್ಷದ ಬಳಿಕ ಮಾರುಕಟ್ಟೆ ಬೇಡಿಕೆ ಕುಸಿದರೆ ಏನು ಮಾಡಬೇಕು? ಹೀಗಾಗಿ ಇದು ಇಂದು, ನಾಳೆಯ ಸಮಸ್ಯೆಯಲ್ಲ, ಆರು ವರ್ಷದ ಬೆಳೆಗಾರರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಅಡಿಕೆಯ ಕುರಿತು ಸರ್ಕಾರದ ನಿಲುವು ಏನು? ವಿಸ್ತರಣೆಗೆ ಬೆಂಬಲ ನೀಡಬೇಕೋ, ಬೇಡವೋ? ಬೆಂಬಲಿಸಬೇಕು ಎಂದರೆ ಏನು ಮಾಡಬೇಕು, ಬೇಡ ಎಂದರೆ ನಿಯಂತ್ರಣ ಮಾಡುವುದು ಹೇಗೆ ಎಂಬ ಬಗ್ಗೆ ಅಧ್ಯಯನ ವರದಿ ಸಿದ್ಧವಾಗಬೇಕು ಎಂದು ಸೂಚಿಸಿದರು.