ದಾಂಡೇಲಿ: ನಗರದ ಪಟೇಲ್ ವೃತ್ತದ ಸಮೀಪದಲ್ಲಿರುವ ಜಗಜ್ಯೋತಿ ಶ್ರೀಬಸವೇಶ್ವರ ಮೂರ್ತಿ ಆವರಣದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಯೋಗಿಗಳು ಹಾಗೂ ನಡೆದಾಡುವ ದೇವರಾದ ಅಗಲಿದ ಶ್ರೀಸಿದ್ದೇಶ್ವರ ಸ್ವಾಮಿಜೀಯವರಿಗೆ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಗೌರವ ಸಮರ್ಪಿಸಿ ಎರಡು ನಿಮಿಷ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎನ್.ಜಿ.ಬ್ಯಾಕೋಡ್, ಬಸವರಾಜ ಕಲಶೆಟ್ಟಿ, ಎಸ್.ಎಸ್.ಪೂಜಾರ, ಕೃಷ್ಣಾ ಕುಲಕರ್ಣಿ, ಫಿರೋಜ್ ಪೀರಜಾದೆ, ಯು.ಎಸ್.ಪಾಟೀಲ, ಪ್ರತಿಯೊಬ್ಬರು ದ್ವೇಷ, ಅಸೂಯೆ ಮರೆತು ಗಿಡ- ಮರ ಪಕ್ಷಿಗಳಂತೆ ಸದಾ ಸಂತೋಷದಿoದ ಬಾಳಿ ಒಳಿತು ಮಾಡಿ, ಮನುಕುಲಕೆ ಪ್ರೀತಿ ನೀಡಿ ಬಾಳಲು ಕಲಿಯಬೇಕು ಎಂಬ ಸಿದ್ದೇಶ್ವರ ಶ್ರೀಯವರ ಮಾತುಗಳನ್ನು ಪಾಲಿಸಿದರೆ, ನುಡಿದಂತೆ ನಡೆದುಕೊಂಡು ನಡೆದಾಡಿದ ದೇವರಿಗೆ ಗೌರವ ನೀಡಿದಂತೆ ಎಂದು ಸಂತಾಪ ಸೂಚಿಸಿ ಕಂಬನಿ ಮಿಡಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಶ್ರೀಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸಿಕೊಟ್ಟ ಶ್ರೀಸಿದ್ದೇಶ್ವರ ಸ್ವಾಮಿಗಳವರ ಆ ಕ್ಷಣಗಳನ್ನು ಸ್ಮರಿಸಿ, ಮೂರ್ತಿ ನಿರ್ಮಾಣ ಕಾರ್ಯಕ್ಕೆ ಅವರು ನೀಡಿದ ಮಾರ್ಗದರ್ಶನ ಮತ್ತು ಆಶೀರ್ವಾದ ಸದಾ ಸ್ಮರಣೀಯವಾಗಿದೆ ಎಂದು ಹೇಳಿ, ಅವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರನ್ನು ನಿತ್ಯ ನಿರಂತರ ಸ್ಮರಿಸುವ ಕಾರ್ಯವಾಗಬೇಕೆಂದರು.