Slide
Slide
Slide
previous arrow
next arrow

ಮೃತ ಯೋಧನಿಗೆ ಹುಟ್ಟೂರಲ್ಲಿ ಅಂತಿಮ ನಮನ ಸಲ್ಲಿಕೆ

300x250 AD

ಅಂಕೋಲಾ: ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸುತ್ತಿರುವ ವೇಳೆ ಅಕಾಲಿಕವಾಗಿ ಮರಣ ಹೊಂದಿದ ಇಲ್ಲಿನ ಲಕ್ಷ್ಮೇಶ್ವರದ ನಾಗರಾಜ ಕಳಸ ಅವರ ಪಾರ್ಥಿವ ಶರೀರವನ್ನು ಅಂಡಮಾನ್ ನಿಕೋಬಾರ್ (ಪೋರ್ಟ ಬ್ಲೇರ್)ನಿಂದ ಹೈದ್ರಾಬಾದ್- ಗೋವಾ ಮಾರ್ಗವಾಗಿ ಹುಟ್ಟೂರಿಗೆ ತಂದು ಅಂತಿಮ ಸಂಸ್ಕಾರ ನಡೆಸಲಾಯಿತು.
ಬೆಳಿಗ್ಗೆಯಿಂದ ಕೆಲವು ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಾಲೂಕಾಡಳಿತದ ಪರವಾಗಿ ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ, ಪಿಎಸೈ ಪ್ರವೀಣಕುಮಾರ, ನೌಕಾಸೇನೆಯ ಅಧಿಕಾರಿಗಳು, ಸ್ಥಳೀಯರಾದ ಆರ್.ಟಿ ಮಿರಾಶಿ, ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಸುಜಾತಾ ಗಾಂವಕರ ಮತ್ತಿತರ ಗಣ್ಯರು ಅಂತಿಮ ನಮನ ಗೌರವ ಸಮರ್ಪಿಸಿದರು. ಸಾರ್ವಜನಿಕರಿಂದ ಅಙತಿಮ ದರ್ಶನದ ನಂತರ ಶೃಂಗರಿಸಲ್ಪಟ್ಟ ರಕ್ಷಕ ವಾಹನದಲ್ಲಿ ಐಸ್ ಫ್ಯಾಕ್ಟರಿ, ಕೆ.ಸಿ ರಸ್ತೆ, ಜೈ ಹಿಂದ್ ಸರ್ಕಲ್, ಕಣಕಣೇಶ್ವರ ಮಾರ್ಗವಾಗಿ ಮೆರವಣಿಗೆ ಮೂಲಕ ಕೋಡೆವಾಡದ ಮುಕ್ತಿ ಧಾಮಕ್ಕೆ ತಲುಪಿದರು.
ಅಲ್ಲಿ ಶವ ಪೆಟ್ಟಿಗೆಗೆ ಹೊದಿಸಿದ್ದ ತ್ರಿವರ್ಣ ಧ್ವಜ, ಮಡಿದ ಸಿಬ್ಬಂದಿಯ ಸಮವಸ್ತ್ರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ದೇಶ ಸೇವೆಗೆ ಮಗನ ಕಳಿಸಿದ ತಂದೆಗೆ ಗೌರವ ಸಲ್ಲಿಸಲಾಯಿತು. ಶಿಸ್ತುಬದ್ಧ ಪಥಸಂಚಲನ, ಪುಷ್ಪ ಚಕ್ರ ಸಮರ್ಪಣೆ, ಮೌನಾಚರಣೆ ನಂತರ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ, ನಂತರ ವಾದ್ಯ ಭಾರಿಸಿ ಅಂತಿಮ ಗೌರವ ಸಮರ್ಪಿಸಿದ ತರುವಾಯ ತಂದೆ ಮುಕುಂದ ಕಳಸ ಚಿತೆಗೆ ಅಗ್ನಿ ಸ್ವರ್ಶ ಮಾಡಿದರು.

ತಂದೆಯ ಹಣೆಗೆ ತಿಲಕವಿಟ್ಟ ಮಕ್ಕಳು…
ಏನೂ ಅರಿಯದ ಪುಟಾಣಿ ಮಕ್ಕಳಿಂದ ಹಿರಿಯರ ಅಣತಿಯಂತೆ ಮೃತ ತಂದೆಯ ಹಣೆಗೆ ಕುಂಕುಮ, ಕೊರಳಿಗೆ ಹಾರ ಹಾಕುವ ಪ್ರಯತ್ನ ನೆರೆದಿದ್ದವರ ಕರುಳು ಹಿಂಡುವಂತಿತ್ತು. ತಂದೆ- ತಾಯಿ, ಪತ್ನಿ ಹಾಗೂ ಬಂಧು- ಬಳಗದರ ಆಕ್ರಂದನ ಮುಗಿಲು ಮುಟ್ಟಿತು.

300x250 AD
Share This
300x250 AD
300x250 AD
300x250 AD
Back to top