Slide
Slide
Slide
previous arrow
next arrow

ಜ.5ಕ್ಕೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಸಂಭ್ರಮ

300x250 AD

ಶಿರಸಿ: ಪ್ರತಿ ವರ್ಷ ಜುಲೈ 1 ರಿಂದ ಜೂನ್ 30 ರ ವರೆಗೆ ಲಯನ್ಸ್ ವರ್ಷ ಎಂದು ಪರಿಗಣಿಸಲಾಗಿದ್ದು ಈ ವರ್ಷ ಶಿರಸಿ ಲಯನ್ಸ್ ಕ್ಲಬ್ ವರ್ಷವಿಡೀ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 1973 ರಲ್ಲಿ ಪ್ರಾರಂಭವಾದ ಶಿರಸಿಯ ಲಯನ್ಸ್ ಕ್ಲಬ್ ತನ್ನ ಯಶಸ್ವಿ ಸೇವಾ ಪಯಣದ 49 ವರ್ಷಗಳನ್ನು ಪೂರ್ಣಗೊಳಿಸಿ ದಿನಾಂಕ 1/7/2022 ರಂದು 50ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಪ್ರಯುಕ್ತ ಸುವರ್ಣಮಹೋತ್ಸವ ಆಚರಿಸುತ್ತಿದೆ. ಈ ಪೂರ್ತಿ ವರ್ಷದಲ್ಲಿಯೂ ಅನೇಕ ಕಾರ್ಯಕ್ರಮಗಳನ್ನೂ, ಚಟುವಟಿಕೆಗಳನ್ನೂ ಯೋಜಿಸಿ ಅನುಷ್ಠಾನಗೊಳಿಸುತ್ತಿದೆ.

ನೂರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಮಾಜಮುಖಿ ಸೇವಾ ಪಥದಲ್ಲಿ ಸಾಗುತ್ತಿರುವ ಲಯನ್ಸ್ ಕ್ಲಬ್, ಶೈಕ್ಷಣಿಕ, ಆರೋಗ್ಯ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಕಾಳಜಿ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಲಯನ್ಸ್ ಶಾಲೆ, ನಯನಾ ನೇತ್ರ ಭಂಡಾರ, ಸಂಸ್ಕೃತಿ (ಪರಿಸರ) ವನದಂತಹ ಶಾಶ್ವತ ಯೋಜನೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸುತ್ತಿದೆ. ಸುವರ್ಣಮಹೋತ್ಸವ ವರ್ಷದ ಅಂಗವಾಗಿ ಈಗಾಗಲೇ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇದೇ ಬರುವ 2023 ಜನವರಿ 5, ಗುರುವಾರದಂದು ಸುವರ್ಣ ಮಹೋತ್ಸವದ ನೆನಪಿಗಾಗಿ ನೂತನವಾಗಿ ನಿರ್ಮಿಸಿದ ಲಯನ್ಸ್ ಸುವರ್ಣ ಸೇವಾ ಸೌಧ ಉದ್ಘಾಟನೆಯಾಗಲಿದೆ. ಇದೇ ಸಂದರ್ಭದಲ್ಲಿ ಶಿರಸಿ ಲಯನ್ಸ್ ಕ್ಲಬ್ ಇದುವರೆಗೆ ನಡೆದು ಬಂದ ದಾರಿಗೆ ಬೆಳಕು ಚೆಲ್ಲುವ ಸ್ಮರಣ ಸಂಚಿಕೆ ಬಿಡುಗಡೆಯಾಗುತ್ತಿದೆ. ಲಯನ್ಸ್ ಅಂತರಾಷ್ಟ್ರೀಯ 3ನೇ ಉಪಾಧ್ಯಕ್ಷ ಲಯನ್ ಎ.ಪಿ.ಸಿಂಗ್ ಲಯನ್ಸ್ ಸುವರ್ಣ ಸೇವಾ ಸೌಧದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. 2025-26 ನೇ ವರ್ಷದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಅಧ್ಯಕ್ಷರಾಗಲಿರುವ ಲಯನ್ ಎ.ಪಿ ಸಿಂಗ್ ನಮ್ಮ ದೇಶದವರು ಎಂಬುದು ನಮಗೆಲ್ಲ ಹೆಮ್ಮೆ. ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆ ಎನಿಸಿಕೊಂಡು ಜಗತ್ತಿನಾದ್ಯಂತ 210 ಕ್ಕೂ ಹೆಚ್ಚು ದೇಶಗಳಲ್ಲಿ ಇರುವ ಲಯನ್ಸ್ ಕ್ಲಬ್ ಸಂಘಟನೆಯ ಅಂತರಾಷ್ಟ್ರೀಯ ಮಟ್ಟದ ಉನ್ನತ ಹುದ್ದೆಗೆ ತಮ್ಮ ಸೇವಾ ಸಾಮರ್ಥ್ಯದಿಂದ ಏರಿದವರು ಲಯನ್ ಎ.ಪಿ. ಸಿಂಗ್.

ಅಂತೆಯೇ ಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕ ಲಯನ್ ಕೆ. ವಂಶೀಧರಬಾಬು ಉಪಸ್ಥಿತರಿದ್ದು “ ಲಯನ್ಸ್ ಸುವರ್ಣ ಸೇವಾ ಸಂಭ್ರಮ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಲಯನ್ಸ್ ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ಲಯನ್ ವಿ.ವಿ. ಕೃಷ್ಣಾರೆಡ್ಡಿಯವರು ಶಿರಸಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರುಗಳ ಭಾವಚಿತ್ರ ಫಲಕವನ್ನು ಅನಾವರಣ ಮಾಡುವರು. ಲಯನ್ಸ್ ಮಲ್ಟಿಪಲ್ ಕೌನ್ಸಿಲ್ 317 ಚೇರ್‌ಪರ್‌ಸನ್ ಲಯನ್ ವಸಂತಕುಮಾರ ಶೆಟ್ಟಿ, 317ಬಿ ಜಿಲ್ಲಾ ಗವರ್ನರ ಲಯನ್ ಸುಗ್ಗಲಾ ಯಳಮಲಿ ಹಾಗೂ 317 ಮಲ್ಟಿಪಲ್ ಕೌನ್ಸಿಲ್‌ನ ಗ್ಲೋಬಲ್ ಆಕ್ಷನ್ ಟೀಮ್ ಲೀಡರ್ ಲಯನ್ ಮೋನಿಕಾ ಸಾವಂತ ಇವರುಗಳು ಶಿರಸಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸುವರು.

300x250 AD

ಲಯನ್ಸ್ ಡಿಸ್ಟ್ರಿಕ್ಟ್ 317ಬಿ ಮೊದಲನೇ ಉಪ ಪ್ರಾಂತಪಾಲ ಲಯನ್ಸ್ ಅರ್ಲ ಬ್ರಿಟೋ, 2ನೇ ಉಪ ಪ್ರಾಂತಪಾಲ ಲಯನ್ ಮನೋಜ ಮನೇಕ್, ಮಾಜಿ ಲಯನ್ ಗವರ್ನರ್ ಹಾಗೂ ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಸಲಹೆಗಾರ ಲಯನ್ ರವಿ ಹೆಗಡೆ ಹೂವಿನಮನೆ, ರೀಜನ್ ಚೇರ್ ಪರ್ಸನ್ ಲಯನ್ ಜ್ಯೋತಿ ಭಟ್, ಝೋನ್ ಚೇರ್ ಪರ್ಸನ್ ಲಯನ್ ನಾಗರಾಜ ಭಟ್ ಇವರುಗಳು ಅತಿಥಿಗಳಾಗಿ ಉಪಸ್ಥಿತರಿರುವರು. ಕರ್ನಾಟಕ ಹಾಗೂ ಗೋವಾದ ಲಯನ್ಸ್ ಮಾಜಿ ಡಿಸ್ಟ್ರಿಕ್ಟ್ ಗೌವರ್ನರ್‌ಗಳು ಮತ್ತು ಲಯನ್ಸ್ ಬಳಗದ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಿಯೋ ಕ್ಲಬ್ ಶಿರಸಿ ಹಾಗೂ ಲಿಯೋ ಕ್ಲಬ್ ಶ್ರೀನಿಕೇತನ ಸದಸ್ಯರುಗಳು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಿರಸಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಸುದ್ದಿಗೋಷ್ಠಿಯಲ್ಲಿ ಸುವರ್ಣಮಹೋತ್ಸವ ವರ್ಷದ ಲಯನ್ಸ್ ಕ್ಲಬ್ ಅಧ್ಯಕ್ಷ ಎಮ್. ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಿತಿಯ ಅಧ್ಯಕ್ಷರಾದ ಎಂ.ಜೆ.ಎಫ್. ಉದಯ ಸ್ವಾದಿಯವರು ಜಂಟಿಯಾಗಿ ಮೇಲಿನ ವಿಷಯಗಳನ್ನು ವಿವರಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಜೆ.ಎಫ್. ಲಯನ್ ರಮಾ ಪಟವರ್ಧನ, ಕೋಶಾಧ್ಯಕ್ಷ ಲಯನ್ ರಾಜಲಕ್ಷ್ಮಿ ಹೆಗಡೆ, ರೀಜನ್ ಚೇರ್‌ಪರ್ಸನ್ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್, ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಕಾರ್ಯದರ್ಶಿ ಲಯನ್ ಎಂ.ಐ. ಹೆಗಡೆ ಮತ್ತಿತ್ತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top