ಕಾರವಾರ: ಬಿಣಗಾದಲ್ಲಿ ಈಚೆಗೆ ಅಪಘಾತಕ್ಕೆ ಬಾಲಕಿ ಬಲಿಯಾಗಿರುವುದು ದುರ್ದೈವದ ಘಟನೆಯಾಗಿದ್ದು, ಇಂತಹ ಅಪಘಾತಗಳಿಗೆ ಅಮಾಯಕರು ಬಲಿಯಾಗುವುದನ್ನು ತಡೆಯಲು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿ ಸೂಚನೆ ನೀಡಿರುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಶನಿವಾರ ಬಿಣಗಾ ಬಳಿ ತಂದೆಯೊoದಿಗೆ ಬಾಲಕಿ ಲವಿತಾ ಫರ್ನಾಂಡಿಸ್ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಬಸ್ ಬಡಿದು ಮೃತಪಟ್ಟಿರುವುದು ನನಗೆ ತೀವ್ರ ನೋವಾಗಿದೆ. ನೊಂದವರ ಜೊತೆ ಸದಾ ಇರುತ್ತೇನೆ. ಚಾಲಕರ ನಿರ್ಲಕ್ಷ್ಯ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ತೋರುವ ನಿಷ್ಕಾಳಜಿ, ವಿಳಂಬವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕಾರವಾರದಿಂದ ಅಂಕೋಲಾ ನಡುವೆ ಸಂಚರಿಸುವ ಖಾಸಗಿ ಬಸ್ ಗಳು ಎಚ್ಚರಿಕೆಯಿಂದ ಚಲಿಸಬೇಕು. ಬೇಕಾಬಿಟ್ಟಿಯಾಗಿ ಅತಿವೇಗದಿಂದ ವಾಹನ ಚಾಲನೆ ಮಾಡಬಾರದು. ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ಹಾಗೂ ಇತರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಈ ನಿಟ್ಟಿನಲ್ಲಿ ಖಾಸಗಿ ಬಸ್ ಗಳ ಮಾಲೀಕರೊಂದಿಗೆ ಸಭೆ ನಡೆಸುವಂತೆ ಸೂಚಿಸಲಾಗಿದೆ.
ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿಯ ನಿರ್ಲಕ್ಷ್ಯತನದಿಂದಲೂ ರಸ್ತೆ ಅಪಘಾತಗಳಾಗುತ್ತಿವೆ. ಐಆರ್‌ಬಿ ಕಂಪನಿ ಅಧಿಕಾರಿಗಳಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಅವರಿಂದ ಸಮರ್ಪಕ ಕೆಲಸ ಆಗುತ್ತಿಲ್ಲ. ಕಾರವಾರ ಹಾಗೂ ಬಿಣಗಾ ನಡುವೆ ಸುರಂಗ ಕಾಮಗಾರಿಯನ್ನು ಸಮರ್ಪಕವಾಗಿ ಪೂರೈಸಿ, ಶೀಘ್ರದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ಆಗಬೇಕು. ಇವೆಲ್ಲ ಸಂಗತಿಗಳ ಬಗ್ಗೆ ಹಾಗೂ ಐಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಈಗಾಗಲೇ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆಯಲಾಗಿದೆ. ಸಚಿವ ಗಡ್ಕರಿ ಅವರೂ ಮನವಿಗೆ ಸ್ಪಂದಿಸಿದ್ದಾರೆ.
ಪ್ರತಿಯೊಬ್ಬರ ಜೀವವೂ ಮುಖ್ಯವಾದುದು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲು ಸೂಚಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಮತ್ತೊಮ್ಮೆ ಮನವಿ ಮಾಡುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.