ಯಲ್ಲಾಪುರ: ಕ್ಷಯ ಗುಣಪಡಿಸುವ ರೋಗವಾಗಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ಔಷಧಿಗಳನ್ನು ವೈದ್ಯರ ನಿರ್ದೇಶನದಂತೆ ತೆಗೆದುಕೊಂಡಾಗ ಬೇಗ ಗುಣ ಹೊಂದಲು ಸಾಧ್ಯ. ಕ್ಷಯ ರೋಗದ ಬಗ್ಗೆ ಭಯಪಡದೇ, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಬೇಕು. ಅಂದಾಗಲೇ ಕಾಯಿಲೆಯಿಂದ ಗುಣವಾಗಲು ಸಾಧ್ಯ ಎಂದು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ ಹೇಳಿದರು.
ಅವರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕ್ಷಯ ರೋಗಿಗಳಿಗೆ ತಮ್ಮ ಸಂಸ್ಥೆ ರಾಮನಾಥ ಕನ್ಸ್ಟ್ರಕ್ಷನ್ ವತಿಯಿಂದ ಪೌಷ್ಟಿಕ ಆಹಾರ ಹಾಗೂ ವಿಟಮಿನ್ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಸಚಿವ ಶಿವರಾಮ ಹೆಬ್ಬಾರ್ ಅವರು, ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಉಳ್ಳವರು ಕೂಡ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಇನ್ನಷ್ಟು ಮೇಲ್ದರ್ಜೆಗೆ ಏರಲಿದೆ ಎಂದ ಅವರು, ಕ್ಷಯ ರೋಗಿಗಳಿಗೆ ಬೇಗ ಚೇತರಿಸಿಕೊಂಡು ಗುಣಮುಖರಾಗುವಂತೆ ಹಾರೈಸಿದರು.
ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಬೊಮ್ಮಯ್ಯ ಗಾಂವ್ಕರ ಮಾತನಾಡಿ, ಬಾಲಕೃಷ್ಣ ನಾಯಕರಂತಹ ದಾನಿಗಳಿಂದ ತಾಲೂಕು ಆಸ್ಪತ್ರೆಯ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಯಾಗುತ್ತಿದೆ. ಇಂತವರು ನಮ್ಮ ಸಮಾಜಕ್ಕೆ ಅಗತ್ಯವಿದೆ. ಪೌಷ್ಟಿಕ ಆಹಾರ ಹಾಗೂ ವಿಟಮಿನ್ ಹಾಗೂ ಔಷಧಿ ಪ್ರಯೋಜನ ಪಡೆಯುವಂತೆ ಅವರು ಸಲಹೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷಯ ರೋಗಿಗಳ ಪೌಷ್ಟಿಕ ಆಹಾರ ಹಾಗೂ ವಿಟಮಿನ್ ನೀಡುವ ದೃಷ್ಟಿಯಿಂದ ಸರ್ಕಾರದ ಮಾರ್ಗದರ್ಶಿಯಂತೆ ಪ್ರತಿ ತಿಂಗಳು ದಾನಿಗಳಿಂದ ಪೌಷ್ಠಿಕ ಆಹಾರ ಕೊಡಲಾಗುತ್ತದೆ. ಪ್ರತಿ ಕಿಟ್‌ನಲ್ಲಿ ಸಿರಿ ಧಾನ್ಯ, ಮಲ್ಟಿ ವಿಟಮಿನ್ ಪೌಡರ್ ಹಾಗೂ ವಿಟಮಿನ್ ಸಿರಪ್, ರಾಗಿ, ಬಟಾಣಿಗಳು ಸೇರಿವೆ. ಯಲ್ಲಾಪುರದಲ್ಲಿ ಒಟ್ಟು 35 ಕ್ಷಯ ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಯಲ್ಲಾಪುರದ ಔಷಧ ವ್ಯಾಪಾರಿಗಳು ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿಟಮಿನ್ ಕಿಟ್ ನೀಡಿದ್ದರು. ಕೂದುಲು, ಉಗುರು ಹೊರತುಪಡಿಸಿ ದೇಹದ ಯಾವುದೇ ಭಾಗಕ್ಕೂ ಕ್ಷಯ (ಟಿಬಿ) ಬರಬಹುದು. ಸತತವಾಗಿ ಕೆಮ್ಮು ಬರುವುದು, ಜ್ವರ ಬರುವುದು, ಹಸಿವೆ ಆಗದೇ ಇರುವುದು, ಟಿಬಿ ಲಕ್ಷಣಗಳಾಗಿವೆ. ಒಬ್ಬ ರೋಗಿ 12 ಜನರಿಗೆ ಸೋಂಕು ಹಚ್ಚುವ ಆತಂಕವಿದೆ. ಯಾವುದೇ ಕಾರಣಕ್ಕೂ ಔಷಧಿಗಳನ್ನು ಮಧ್ಯದಲ್ಲಿ ನಿಲ್ಲಿಸಬಾರದು. ಹೀಗೆ ಮಾಡಿದಾಗ ದೇಹದ ರೋಗನಿರೋಧಕ ಶಕ್ತಿ ಕ್ಷಿಣಿಸಿ ರೋಗಿಗೆ ಔಷಧಿಗಳು ಕೂಡ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಆರೋಗ್ಯವಂತರಾಗಿದ್ದರೆ ಏನನ್ನೂ ಸಾಧಿಸಬಹುದು ಎಂದರು,
ಬಾಲಕೃಷ್ಣ ನಾಯಕ ಅವರು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ನಮ್ಮ ಆಸ್ಪತ್ರೆಗೆ ದಾನವಾಗಿ ಕೋವಿಡ್ ಕೇಂದ್ರವನ್ನು ಸ್ಥಾಪಿಸಿಕೊಟ್ಟಿದ್ದಾರೆ. ಹೈಟೆಕ್ ಅಂಬುಲೇನ್ಸ್ ದೇಣಿಗೆ ನೀಡಿದ್ದಾರೆ. ಇಂದು ಕ್ಷಯ ರೋಗಿಗಳಿಗಾಗಿ ಪೌಷ್ಟಿಕ ಆಹಾರ ಹಾಗೂ ವಿಟಮಿನ್ ಕಿಟ್‌ಗಳನ್ನು ನೀಡುತ್ತಿದ್ದಾರೆ. ಇಂತಹ ದಾನಿಗಳು ನೀಡಿದ ಕೊಡುಗೆಯನ್ನು ಸರಿಯಾಗಿ ಬಳಸಿಕೊಂಡು ಶೀಘ್ರ ಗುಣಮುಖರಾಗುವಂತೆ ಡಾ.ಪವಾರ್ ಕರೆ ನೀಡಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ ಸ್ವಾಗತಿಸಿ, ನಿರೂಪಿಸಿದರು. ಕ್ಷಯ ರೋಗ ನಿರೀಕ್ಷಣಾಧಿಕಾರಿ ರಮೇಶ ಅಣ್ಣಿಗೇರಿ ವಂದಿಸಿದರು.