ಹೊನ್ನಾವರ: ತಾಲೂಕಿನ ಕೆಂಚಗಾರ್ ರಮೇಶ್ ನಾಯ್ಕ ನೇತೃತ್ವದಲ್ಲಿ ಊರಿನ ಹಾಗೂ ಸುತ್ತ ಮುತ್ತಲಿನ ಭಕ್ತಾದಿಗಳು ಸೇರಿ ಒಟ್ಟೂ 21 ಜನ ಯಾತ್ರಾರ್ಥಿಗಳು ‘ನಮ್ಮ ನಡಿಗೆ ಮಂಜುನಾಥನ ಕಡೆಗೆ’ ಎಂಬಂತೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಮುಂಜಾನೆ ಕೆಂಚಗಾರ್ ವಾದಿರಾಜ ಮಠದ ಶ್ರೀ ಸೀತಾರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ ಇವರು, ಬರಿಗಾಲಿನಲ್ಲಿ 300 ಕಿಲೋ ಮೀಟರ್ ದೂರವನ್ನು ಆರು ದಿನಗಳಲ್ಲಿ ಕ್ರಮಿಸಿ, ಶ್ರೀಕ್ಷೇತ್ರ ಧರ್ಮಸ್ಥಳವನ್ನು ತಲುಪುವರು. ಮುಂದಿನ ಭಾನುವಾರ ನೇತ್ರಾವತಿಯಲ್ಲಿ ಸ್ನಾನ ಮಾಡಿ ಶ್ರೀದೇವಳಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು ಯಾತ್ರೆ ಪೂರ್ಣಗೊಳಿಸುವರು.
ರಮೇಶ್ ನಾಯ್ಕ ಹಾಗೂ ಮಿತ್ರರು ಸೇರಿ ಪ್ರಥಮವಾಗಿ 1999ರಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಈ ಬಾರಿ 24ನೇ ವರ್ಷದ ಪಾದಯಾತ್ರೆ ಆಗಿದೆ. ಪಾದಯಾತ್ರೆ ಸಮಯದಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದ 10 ಗಂಟೆಯವರೆಗೆ ನಡೆದು, ನಂತರ ವಿಶ್ರಾಂತಿ ಪಡೆದು ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ದೇವಾಲಯದಲ್ಲಿ ಆಶ್ರಯ ಪಡೆಯಲಿದ್ದಾರೆ.
ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಕ್ತಿಭಾವ ಬಹಳ ಮುಖ್ಯ. ದೇವರು ದೇಹದಲ್ಲಿ ಶಕ್ತಿ ಇಟ್ಟಿರುವಷ್ಟು ವರ್ಷ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಿದ್ದೇನೆ.
• ಲಕ್ಷ್ಮಣ ನಾಯ್ಕ, ಹಿರಿಯ ಯಾತ್ರಿಕ