ಶಿರಸಿ: ತಾಲೂಕಿನ ಬರೂರು ಸಮೀಪದ ಹಳ್ಳಿಕಾನಿನ ಶ್ರೀಭೂತೇಶ್ವರ ಸನ್ನಿಧಿಯಲ್ಲಿ ನಡೆಸಲಾಗುತ್ತಿದ್ದ ಮಕರ ಸಂಕ್ರಾಂತಿ ಮಹೋತ್ಸವಕ್ಕೆ ಈ ವರ್ಷ ಸುವರ್ಣ ವರ್ಷದ ಬೆಡಗಾಗಿದ್ದು, ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಪ್ರಯುಕ್ತ ಜ.13 ಮತ್ತು 14 ಜನವರಿ 2023ರಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ.
13ರಂದು ಬೆಳಿಗ್ಗೆ 8ಕ್ಕೆ ಶ್ರೀದೇವರ ಬೆಳ್ಳಿ ಮುಖ ಕವಚ ಮೆರವಣಿಗೆ ನಡೆಯಲಿದ್ದು, ಬಳಿಕ ವಿವಿಧ ಪೂಜೆ ಪುನಸ್ಕಾರಗಳು, ಗಣಹವನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ನಡೆಯುವ ಧರ್ಮಸಭೆಯಲ್ಲಿ ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿಗಳು ಹಾಗೂ ಕ್ಯಾದಗಿಕೊಪ್ಪ ಗುರುಮಠದ ಶ್ರೀಕಲ್ಯಾಣ ಸ್ವಾಮೀಜಿಗಳು ಸಾನ್ನಿಧ್ಯ ನೀಡಲಿದ್ದಾರೆ. ಸಂಜೆ ಕಲಶ ಸ್ಥಾಪನೆ, ಮಹಾಮಂಗಳಾರತಿ ನಡೆಯಲಿದ್ದು, ರಾತ್ರಿ 7ಕ್ಕೆ ಮಕ್ಕಳ ಮನರಂಜನಾ ಕಾರ್ಯಕ್ರಮ ಹಾಗೂ ಪುನೀತ ನಮನ 9ರಿಂದ ತ್ರಿಶಬ್ದಿ ಎಂಟರಟ್ರೇನರ್ಸ ಅವರಿಂದ ಆರ್ಕೆಸ್ಟ್ರಾ ನಡೆಯಲಿದೆ.
14ರ ಬೆಳಿಗ್ಗೆ 8 ರಿಂದ ಸಾಮೂಹಿಕ ಸತ್ಯನಾರಾಯಣ ವೃತಕಥೆ, ವಿವಿಧ ಪೂಜೆ, ಎಳ್ಳು ಬೆಲ್ಲ ಹಂಚಿಕೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಫಲಾವಳಿಗಳ ಹರಾಜು ನಡೆಯಲಿದೆ. ಎರಡು ದಿನವು ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ಭೋಜನ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಕಲ್ಪಿಸಲಾಗಿದೆ. ಅದೇ ದಿನ ಸಂಜೆ 5ಕ್ಕೆ ವಿವಿಧ ಭಜನಾ ತಂಡದಿಂದ ಭಜನೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ9:30ರಿಂದ ಸಾಲಿಗ್ರಾಮ ಮೇಳದಿಂದ ಚಂದ್ರಾವಳಿ ವಿಲಾಸ, ನಾಗಶ್ರೀ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.