ಶಿರಸಿ: ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಸೇವಾದಳ ಸಪ್ತಾಹದ ಅಂಗವಾಗಿ ಪದವಿಪೂರ್ವ ಇಲಾಖೆಯ ಉಪನ್ಯಾಸಕರಿಗೆ ಹಾಗೂ ಜಿಲ್ಲೆಯ ಆಜೀವ ಸದಸ್ಯರಿಗೆ ಭಾರತ ಸೇವಾದಳ ಹಾಗೂ ರಾಷ್ಟ್ರಧ್ವಜ ಮಾಹಿತಿ ಶಿಬಿರ ನಡೆಸಲಾಯಿತು.
ಜಿಲ್ಲಾ ಸಮಿತಿ ಸದಸ್ಯ ಡಾ.ಎಸ್.ಐ.ಭಟ್ಟ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸೇವಾ ಸಂಸ್ಕಾರದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಸೇವಾದಳದ ಉದ್ದೇಶ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರೊ.ಕೆ.ಎನ್.ಹೊಸ್ಮನಿ ಉಪನ್ಯಾಸದಲ್ಲಿ ಸೇವಾದಳ ಇಂದಿನ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಯಾವ ರೀತಿ ಉಪಯುಕ್ತ ಎಂಬ ಮಾಹಿತಿ ನೀಡಿದರು.
ತಾಲೂಕಾ ಅಧ್ಯಕ್ಷ ಅಶೋಕ ಭಜಂತ್ರಿ ಸೇವಾದಳ ಸಪ್ತಾಹದ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ವಿ.ಎಸ್.ನಾಯಕ ಸೇವಾದಳದ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷೆ ವೀಣಾ ಭಟ್ಟ, ಜಿಲ್ಲಾ ಸಮಿತಿ ಸದಸ್ಯ ಗಜಾನನ ಹೆಗಡೆ ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆಯಾಗಿ ತರಬೇತಿ ನೀಡಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಮಚಂದ್ರ ಹೆಗಡೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತವಿಕ ನುಡಿದರು. ಜಿಲ್ಲಾ ಸಮಿತಿ ಸದಸ್ಯ ಸುಧಾಮ ಪೈ ನಿರೂಪಿಸಿದರು.