Slide
Slide
Slide
previous arrow
next arrow

ಪ್ರಭಾಕರ್ ಭಟ್’ಗೆ ಸಂಗೀತವೇ ಬದುಕು, ಬದುಕಿನಲ್ಲಿ ಸಂಗೀತವಲ್ಲ: ವಿ. ಉಮಾಕಾಂತ್ ಭಟ್

300x250 AD

ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿ ಪಂ.ಪ್ರಭಾಕರ್ ಭಟ್ ಜನ್ಮ ಅಮೃತ ಮಹೋತ್ಸವ, ಗುರುನಮನ ಕಾರ್ಯಕ್ರಮವು ಜ.1,‌ ರವಿವಾರದಂದು‌ ವೈಭವಯುತವಾಗಿ ನೆರವೇರಿತು.

ಬೆಳಿಗ್ಗೆ ನಿಗದಿತ ಸಮಯಕ್ಕೆ ಪ್ರಾರಂಭವಾದ ಕಾರ್ಯಕ್ರಮವು ಶಿಷ್ಯ ಬಳಗದವರ ಗಾಯನ, ವಾದನ ಕಾರ್ಯಕ್ರಮಗಳೊಂದಿಗೆ ಮುಂದುವರೆದು, ಎಲ್ಲಾ‌ ಶಿಷ್ಯಂದಿರು ತಮ್ಮ ಗುರುಗಳ ಮುಂದೆ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಿದರು. ಸಾಗರದ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಗುರು ವಿ. ವಸುಧಾ ಶರ್ಮಾ ಇವರ ಶಿಷ್ಯವೃಂದದವರು ವಿಶಿಷ್ಟ ಸಂಯೋಜನೆಯ ಗಾಯನದ ಮೂಲಕ ಗುರುವಿಗೆ, ಗುರುಪರಂಪರೆಗೆ ನಮನ ಸಲ್ಲಿಸಿದರು.

ಸಾಯಂಕಾಲ ನಡೆದ ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾವಾಚಸ್ಪತಿ ವಿ.ಉಮಾಕಾಂತ್ ಭಟ್ ಕೆರೆಕೈ ಮಾತನಾಡಿ, ಗುರು‌ಪರಂಪರೆ‌‌ ಸಂಗೀತ ಕ್ಷೇತ್ರದಲ್ಲಿ ಮಹತ್ವವಾಗಿ ಕಂಡುಬರುತ್ತದೆ.  ಜಿ.ಎಸ್.ಹೆಗಡೆ ಬೆಳ್ಳೆಕೇರಿ,‌ ಬೆಳ್ಳೆಕೇರಿ ಮಾಸ್ತರ್ ಎಂದೇ ಪರಿಚಿತರಾದವರು. ಆಗ್ರಾ ಘರಾನಾವನ್ನು ಪರಿಚಯಿಸಿ‌ ಶಿರಸಿ ಭಾಗದಲ್ಲಿನ ಹಲವು ಮಕ್ಕಳನ್ನು ಒಗ್ಗೂಡಿಸಿ, ಪ್ರೀತಿಯಿಂದ ಕಲಿಸಿದ್ದರು. ಅವರ ಗುರುಪರಂಪರೆಗೆ ಮೊದಲಿಗರು‌ ಕಮಲಾಕರ್ ಭಟ್.  ಅವರು ಭೌತಿಕವಾಗಿ ಕಾಣೆಯಾಗಿದ್ದರೂ‌ ಅವರ ಸಂಸ್ಕಾರ, ಸಂಗೀತಗಳು ನಮ್ಮ ಸುತ್ತಮುತ್ತಲಿದೆ. ಅದೆಲ್ಲದರ ಉತ್ತರಾಧಿಕಾರಿಯಾಗಿ ಇಂದು ನಮ್ಮ‌ಜೊತೆ ಪ್ರಭಾಕರ್ ಭಟ್ ಇದ್ದಾರೆ. ಅವರು ತಮ್ಮ ಪಾಂಡಿತ್ಯವನ್ನು ಪಡೆಯಲು ಜೀವನವನ್ನೇ ಸವೆದಿದ್ದಾರೆ.

ಆದರೆ ಈ ಸಂಗೀತ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ರಂಗಭೂಮಿಯ ಹಾಡುಗಳಿಗೆ ಮಾರುಹೋಗಿದ್ದ ಅಂದಿನ ಕಾಲದಲ್ಲಿ ಶಾಸ್ತ್ರೀಯ ಸಂಗೀತದ ಪರಿಚಯ ನೀಡುವುದು ಸುಲಭದ ಮಾತಾಗಿರಲಿಲ್ಲ. ಶಾಸ್ತ್ರೀಯ ಸಂಗೀತಕ್ಕಾಗಿ ವಿದ್ಯಾರ್ಥಿಗಳನ್ನು ಸೆಳೆಯುವುದು, ಕೇಳುಗರನ್ನು ಸಂಪಾದಿಸುವುದರಲ್ಲಿ ಶ್ರಮ ಪಟ್ಟವರಲ್ಲಿ ಮೊದಲಿಗರಾಗಿ ಕೆರೆಕೈ ಸಹೋದರರು ನಿಲ್ಲುತ್ತಾರೆ. ಕೌಟುಂಬಿಕ ಸಮಸ್ಯೆ,ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟ‌ ಸಂದರ್ಭದಲ್ಲಿಯೂ ಛಲ ಬಿಡದೇ ತಮ್ಮ ಸಾಧನೆಯ ಹಾದಿಯಲ್ಲಿ ಮುಂದುವರೆದು ಉನ್ನತಿಯನ್ನು ಸಾಧಿಸಿದ್ದಾರೆ. ಬಡತನ ಕಾಡುತ್ತಿದ್ದರೂ, ಸ್ವಾಭಿಮಾನ ಬಿಡದ ಛಲಗಾರರು ಇವರು. ಎಷ್ಟೋ ಬಾರಿ ಅವರನ್ನು ಸೋಲಿಸುವ ಸಮಯ ಬಂದರೂ ಸೋಲದೇ ಪ್ರತಿಭಟನೆಯ ದಾರಿ ಹಿಡಿಯದೇ, ಸಾಧನೆಯ ದಾರಿ ಹಿಡಿದವರು. ಹಣ ಮಾಡದೇ ಗುಣ ಸಂಪಾದಿಸಿದವರು. ಈ ಸಹೋದರರಿಗೆ ಬೇರೆ ಎಲ್ಲಾ ಸೌಲಭ್ಯ, ಸವಲತ್ತುಗಳು ಇದ್ದಿದ್ದರೆ ಆಗ್ರಾ ಘರಾನಾಕ್ಕೆ ಇಷ್ಟು ಒಳ್ಳೆಯ ಉತ್ತರಾಧಿಕಾಗಳು ಸಿಗುತ್ತಿರಲಿಲ್ಲ. ಪ್ರಭಾಕರ್ ಭಟ್ಟರಿಗೆ ಸಂಗೀತವೇ ಬದುಕು,ಬದುಕಿನಲ್ಲಿ ಸಂಗೀತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂತಹ‌ ಒಂದು ಕಲಾಕುಟುಂಬದ ಹೆಮ್ಮೆಯ ಕುಡಿಗಳೂ ಕೂಡಾ ಸಂಗೀತದ ಹಾದಿಯಲ್ಲೇ ನಡೆಯುತ್ತಿರುವುದು ಉತ್ತಮ‌ ಭವಿಷ್ಯದ ಲಕ್ಷಣವಾಗಿದೆ. ಇಂದು ತಂದೆ ಮಕ್ಕಳ ಜುಗಲ್ಬಂದಿ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಖುಷಿ, ಹೆಮ್ಮೆಯ ವಿಷಯವಾಗಿದೆ. ಪ್ರಭಾಕರ್ ಭಟ್ಟರಿಗೆ ಇನ್ನಷ್ಟು ಆರೋಗ್ಯ, ಚೈತನ್ಯ, ಶಕ್ತಿಯನ್ನು ದೇವರು ದಯಪಾಲಿಸಿ ಮುಂದಿನ ದಿನಗಳಲ್ಲಿ‌ ಅಜ್ಜ- ಮೊಮ್ಮಕ್ಕಳ ಜುಗಲ್ಬಂದಿ‌ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ನಿವೃತ್ತ ಎಜಿಎಮ್ ಸಿ.ಎಸ್.ಹೆಗಡೆ ಉಪಸ್ಥಿತರಿದ್ದರು.

300x250 AD

ನಂತರದಲ್ಲಿ‌ ಪಂ.ಪ್ರಭಾಕರ್ ಭಟ್ಟರಿಗೆ ಶಿಷ್ಯವೃಂದದವರಿಂದ ಗೌರವ ಸಮರ್ಪಣೆ, ಗುರು ನಮನವನ್ನು ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ದಿ.ಕಮಲಾಕರ್ ಭಟ್ಟರ ಧರ್ಮಪತ್ನಿ ಉಮಾ‌‌ ಭಟ್ ಹಾಗೂ ಪಂ.ಮೋಹನ ಹೆಗಡೆ ಹುಣಸೇಕೊಪ್ಪ ಹಾಗೂ ವರಮಹಾಲಕ್ಷ್ಮಿ ಮೋಹನ ಹೆಗಡೆ ದಂಪತಿಗಳಿಗೂ ಗೌರವ ಸಮರ್ಪಣೆಯು ನೆರವೇರಿತು.

ಸಭಾ ಕಾರ್ಯಕ್ರಮದ ನಂತರ ನಡೆದ ಪಂ.ಪ್ರಭಾಕರ್ ಭಟ್ ಗಾಯನ ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿ, ಸಂಗೀತಕ್ಕೆ ವಯಸ್ಸಿನ‌ ಹಂಗಿಲ್ಲ ಎನ್ನುವುದನ್ನು‌ ತೋರಿಸಿತು. ನಂತರ ಪ್ರಭಾಕರ್ ಭಟ್ ಹಾಗೂ ಕಿರಣ್ ಭಟ್ ಕೆರೆಕೈ ಜುಗಲ್ಬಂದಿ ಕಾರ್ಯಕ್ರಮವು, ಸಂಗೀತಕ್ಕೆ ಕಾಲ,ದೇಶಗಳ ಪರಿಮಿತಿಯಿಲ್ಲದಿರುವುದೊಂದೇ ಅಲ್ಲ, ಅವೆಲ್ಲವನ್ನೂ ಮರೆಸುವ ಶಕ್ತಿಯಿದೆ‌ ಎನ್ನುವುದನ್ನು ಸಾಕ್ಷೀಕರಿಸಿತು.

ಕಾರ್ಯಕ್ರಮವನ್ನು‌ ಶ್ರೀಧರ್ ಹೆಗಡೆ ಸಾಗರ, ಸಭಾ ಕಾರ್ಯಕ್ರಮವನ್ನು ಸಿಂಧುಚಂದ್ರ ನಿರೂಪಿಸಿದರು.ಉದಯ್ ಭಟ್ ಕೆರೆಕೈ‌ ವೇದಘೋಷ ನಿರ್ವಹಿಸಿದರೆ, ಸನ್ಮಾನ ಪತ್ರವನ್ನು ಜಿ.ಎನ್.ಹೆಗಡೆ ಬಣಗಿ, ಕಿರಣ್ ಮಗೆಗಾರ್ ವಾಚಿಸಿದರು.

Share This
300x250 AD
300x250 AD
300x250 AD
Back to top