ಯಲ್ಲಾಪುರ: ಎನ್.ಎಸ್.ಹೆಗಡೆ ಕುಂದರಗಿಯವರು ಎಲ್ಲೆಲ್ಲಿಂದಲೋ ಹಣ ತಂದು ಇಲ್ಲಿ, ಈ ಶಿಕ್ಷಣ ಸಂಸ್ಥೆಯನ್ನು ಕಟ್ಟದಿದ್ದರೆ ಈ ಭಾಗದ ಜನರಿಗೆ ಶಿಕ್ಷಣ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಅವರು ಇದಲ್ಲದೆ ಇನ್ನೂ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಬೆಳೆಸಿದ ಸಂಸ್ಥೆಗಳು ನಮ್ಮೊಂದಿಗಿವೆ. ಇಲ್ಲಿ ಹೈಸ್ಕೂಲಿನ ಎದುರು ನಾವೆಲ್ಲ ಸೇರಿ ಅವರದೊಂದು ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಅವರನ್ನು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಭರತನಹಳ್ಳಿಯ ಪ್ರಗತಿ ಸಭಾಭವನದಲ್ಲಿ ದಿ.ಎನ್.ಎಸ್.ಹೆಗಡೆ ಕುಂ rದರಗಿಯವರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದರು. ಪಂ.ರಾ.ವಿ.ಸ. ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬದುಕಿನೊಂದಿಗಿನ ಅವರ ಸೃಜನಾತ್ಮಕ ಕ್ರಿಯೆಗಳು ಅವರು ಇಷ್ಟೆಲ್ಲಾ ಚಟುವಟಿಕೆಯಿಂದ, ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿರಬಹುದು. ಎನ್.ಎಸ್.ಹೆಗಡೆ ಕುಂದರಗಿ ಅಗಲಿದರೂ ಅವರ ಸಾಧನೆಗಳು ಸದಾ ನಮಗೆಲ್ಲ ಸ್ಫೂರ್ತಿಯಾಗಿ ನಮ್ಮೊಂದಿಗಿವೆ ಎಂದು ಹೇಳಿದರು.
ಕುಂದರಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಪಿ.ಹೆಗಡೆ ಭರತನಹಳ್ಳಿ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಲ್.ಟಿ.ಪಾಟೀಲ್, ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಉಮ್ಮಚ್ಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ಕುಂದರ್ಗಿ ಪ್ಯಾಡಿ ಸೊಸೈಟಿ ಅಧ್ಯಕ್ಷ ಉದಯ ಭಟ್ಟ ಕಲ್ಲಳ್ಳಿ, ಕುಂದರ್ಗಿ ಗ್ರಾ.ಪಂ. ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ ಮಂಚಿಕೇರಿ, ರಾಜರಾಜೇಶ್ವರಿ ಪ್ರೌಢಶಾಲೆಯ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳ್ಕೊಪ್ಪ ಮೊದಲಾದವರು ನುಡಿ ನಮನ ಸಲ್ಲಿಸಿದರು. ಮೊದಲು ಪ್ರಗತಿ ವಿದ್ಯಾ ಸಂಸ್ಥೆಯ ಮಕ್ಕಳು ಭಗವದ್ಗೀತಾ ವಾಚನ ಮಾಡಿದರು.