ಹಳಿಯಾಳ: ಡಿ.21ರಿಂದ 27ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶ್ರೀ ವಿಆರ್‌ಡಿಎಮ್ ಟ್ರಸ್ಟ್ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 13 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗಿಯಾದರು.
ಈ ಅಂತರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ವಿದ್ಯಾರ್ಥಿಗಳು ಅಂತರರಾಜ್ಯ ಹಾಗೂ ದೇಶ- ವಿದೇಶಗಳ 50,000ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ನೃತ್ಯ, ಹಾಡು, ನಾಟಕಗಳನ್ನು ಪ್ರಸ್ತುತಪಡಿಸಿದರು.
ಪ್ರತಿದಿನ ಎಲ್ಲ ವಿದ್ಯಾರ್ಥಿಗಳು ಶಿಬಿರದಲ್ಲಿ ನಡೆಯುವ ಯೋಗಾಭ್ಯಾಸ, ಸಾಹಸಿ ಕ್ರೀಡೆಗಳು ಹಾಗೂ ಮನರಂಜನಾ ಆಟಗಳಲ್ಲಿ ಪಾಲ್ಗೊಂಡು ಉತ್ತಮ ಹವ್ಯಾಸ, ಕ್ರಿಯಾಶೀಲ ಜ್ಞಾನಾರ್ಜನೆ ಮತ್ತು ಹೊಸ ಹೊಸ ಕೌಶಲಗಳನ್ನು ಅರಿತರು. ಈ ಅಂತರರಾಷ್ಟ್ರೀಯ ಜಾಂಬೂರಿಯ ಶಿಬಿರದಲ್ಲಿ ಶಾಲೆಯ ಸ್ಕೌಟ್ಸ್ ತರಬೇತುದಾರರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಮೇಶ ಕುರಿಯವರು ಮಾರ್ಗದರ್ಶಿ ಶಿಕ್ಷಕರಾಗಿ ಭಾಗಿಯಾಗಿದ್ದರು.