Slide
Slide
Slide
previous arrow
next arrow

ಡಿ.31ಕ್ಕೆ ವೃತ್ತಿ ಬದುಕಿಗೆ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ನಿವೃತ್ತಿ

300x250 AD

ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ಹೆಗಡೆ ಅವರ ವೃತ್ತಿ ಬದುಕಿನಿಂದ ಡಿ.31ರಂದು ನಿವೃತ್ತಿ ಹೊಂದುತ್ತಿದ್ದಾರೆ.
ಕಳೆದ 36 ವರ್ಷಗಳಿಂದ ಮಹಾವಿದ್ಯಾಲಯದಲ್ಲಿ ಆಂಗ್ಲ ವಿಭಾಗದ ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಳೆದ ಒಂದು ವರ್ಷದಿಂದ ಕಾಲೇಜಿನ ಪ್ರಾಚಾರ್ಯರಾಗಿ ಅನುಪಮ ಸೇವೆ ಸಲ್ಲಿರುವ ಡಾ.ಆರ್.ಜಿ.ಹೆಗಡೆಯವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಾಗಿ ಚಿರಪರಿಚಿತರಾಗಿದ್ದಾರೆ. ಮೂಲತಃ ಕುಮಟಾ ತಾಲ್ಲೂಕಿನ ಮೂರುರು ನಿವಾಸಿಯಾಗಿರುವ ಡಾ.ಆರ್.ಜಿ.ಹೆಗಡೆಯವರು ಭಾರತದ ಇಂಗ್ಲೀಷ್ ಕಾದಂಬರಿಗಳಲ್ಲಿ ರಾಜಕೀಯ ಸಂಸ್ಕೃತಿ ಕುರಿತು ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಐಐಟಿ ಕಾನ್ಪುರದ ಸಾಫ್ಟ್ ಸ್ಕಿಲ್ ಪ್ರಮರ್ ಮತ್ತು ಎಡ್ವಾನ್ಸಡ್ ಮೂಕ್ ಕೋರ್ಸ್ಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರದ್ದು. ಜಾಗತಿಕ ಪ್ರಸಿದ್ಧ ವಾರ್ಟನ್ ವಿಶ್ವವಿದ್ಯಾಲಯದಿಂದ ನಡೆದ ಸಂವಹನ ಕೌಶಲ್ಯದಲ್ಲಿ ಆನ್ಲೈನ್ ಕೋರ್ಸ್ ಮೂಲಕ ಹೆಚ್ಚಿನ ಅನುಭವ ಪಡೆದುಕೊಂಡಿದ್ದಾರೆ.
ದೇಶದ ನೂರಾರು ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ, ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಅಧ್ಯಕ್ಷತೆ, ಹನ್ನೊಂದು ಅಂತರಾಷ್ಟ್ರೀಯ ಸಮ್ಮೇಳನ ಸೇರಿದಂತೆ ನೂರಕ್ಕಿಂತ ಹೆಚ್ಚು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿರುವ ಶ್ರೇಯಸ್ಸು ಡಾ.ಆರ್.ಜಿ.ಹೆಗಡೆಯವರಿಗೆ ಸಲ್ಲುತ್ತದೆ. ಸುಮಾರು 40 ಕಾಲೇಜುಗಳಿಗೆ ಸಮಗ್ರ ಅಭಿವೃದ್ಧಿ ಕುರಿತು ತರಬೇತಿ, ಸುಮಾರು ಐನೂರಕ್ಕೂ ಹೆಚ್ಚು ಸಂವಹನ ಕೌಶಲ್ಯ, ನಾಯಕತ್ವ, ಉತ್ತಮ ಕಲಿಯುವಿಕೆಯ ತಂತ್ರಗಳ ಕುರಿತು ಅನೇಕ ಕಾಲೇಜುಗಳಲ್ಲಿ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ತರಬೇತಿ ನೀಡಿದ್ದಾರೆ. ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು ಒಂದು ಸಾವಿರದಷ್ಟು ಪ್ರಾಧ್ಯಾಪಕರಿಗೆ ಹಾಗೂ ರಾಜ್ಯಾದಾದ್ಯಂತ ಪ್ರಾಚಾರ್ಯರಿಗೆ ತರಬೇತಿಯನ್ನು ಡಾ.ಆರ್.ಜಿ.ಹೆಗಡೆಯವರು ನೀಡಿ ಗಮನ ಸೆಳೆದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೆ.ಎಲ್.ಇಯ ಲಿಂಗರಾಜು ಕಾಲೇಜಿನ ಆಂಗ್ಲ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇದರ ಜೊತೆಗೆ ಅನೇಕ ಪಿ.ಎಚ್.ಡಿ ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ದಾಂಡೇಲಿ ಶಿಕ್ಷಣ ಸಂಸ್ಥೆಯ ಸಲಹೆಗಾರರಾಗಿ, ವಿಜಾಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಹಳಿಯಾಳದ ವಿವಿಡಿ ಸ್ಕೂಲ್ ಆಪ್ ಎಕ್ಸಲೆನ್ಸ್ ಇದರ ಆಡಳಿತ ಮಂಡಳಿಯ ಸದಸ್ಯರಾಗಿ, ದೇಶಪಾಂಡೆ ಆರ‍್ಸೆಟಿಯ ಪಠ್ಯಸಮಿತಿಯ ಸದಸ್ಯರಾಗಿ, ದಾಂಡೇಲಿಯ ಜೆಸಿಸ್ ಮತ್ತು ರೋಟರಿ ಕ್ಲಬಿನ ಅಧ್ಯಕ್ಷರಾಗಿ, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಸೇವೆಯನ್ನು ಸಲ್ಲಿಸಿದ ಸಂತಸ ಡಾ.ಆರ್.ಜಿ.ಹೆಗಡೆಯವರಿಗಿದೆ.
ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ತರಬೇತಿದಾರರಾಗಿ ಮಾತ್ರವಲ್ಲದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಡಾ.ಆರ್.ಜಿ.ಹೆಗಡೆಯವರ 500 ಕ್ಕೂ ಹೆಚ್ಚು ಅಂಕಣಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅದಮ್ಯ ಚೇತನ, ಇಂಡಿಯನ್ ಇಂಗ್ಲಿಷ್ ಪೊಲಿಟಿಕಲ್ ನಾವೆಲ್, ಉಳಿಯುವುದು ಮೌನ ಕವನ ಸಂಕಲನ, ನೂರಕ್ಕೆ ನೂರು-ಶಿಕ್ಷಣ ಕ್ಷೇತ್ರದ ಅಧ್ಯಯನಗಳು, ಪ್ರಭುತ್ವದ ತಲ್ಲಣಗಳು-ರಾಜಕೀಯ ಅಧ್ಯಯನಗಳು, ಎಡಬಲಗಳ ನಡುವೆ-ರಾಜಕೀಯ ಅಧ್ಯಯನಗಳು, ಮೊದಲ ಮಳೆಯ ಪರಿಮಳ-ಒಂದು ಸಂಸ್ಕೃತಿಯ ಕಥೆಗಳು, ಕರ್ಮಯೋಗಿ ಹೀಗೆ ಸಾಕಷ್ಟು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಾಧನೆ ಡಾ.ಆರ್.ಜಿ.ಹೆಗಡೆಯವರದ್ದಾಗಿದೆ. ಇನ್ನೂ ಅವರ ಹತ್ತು ಕೃತಿಗಳು ಮುದ್ರಣದ ಅಂಚಿನಲ್ಲಿವೆ. ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಮತ್ತು ತಾಳಮದ್ದಲೆಯ ಕಲಾವಿದರಾಗಿಯೂ ಕಲಾಸೇವೆಯಲ್ಲೂ ಹೆಗಡೆಯವರು ಸೈ ಎನಿಸಿಕೊಂಡಿದ್ದಾರೆ.
ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಿ ಸುಧೀರ್ಘ ಮೂವತ್ತಾರು ವರ್ಷಗಳ ವೃತ್ತಿ ಬದುಕಿನ ಪಯಾಣದಲ್ಲಿ ಅಗಾಧವಾಗಿ ಬೆಳೆದು, ಶೈಕ್ಷಣಿಕ ಕ್ಷೇತ್ರಕ್ಕೆ ಅತ್ಯುನ್ನತ ಆಸ್ತಿಯಾಗಿ ಮೂಡಿಬಂದಿರುವ ಡಾ.ಆರ್.ಜಿ.ಹೆಗಡೆಯವರಿಗೆ ಅವರ ನಿವೃತ್ತಿ ಜೀವನಕ್ಕೆ ನಗರದ ಗಣ್ಯರನೇಕರು ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top