ಕುಮಟಾ: ಜಾಹೀರಾತು ಮೋಹ ಹಾಗೂ ಸರಕು ವ್ಯಾಮೋಹ ಇಂದು ನಮ್ಮನ್ನು ಭ್ರಮಾತ್ಮಕ ಜೀವನದತ್ತ ಕೊಂಡೊಯ್ಯುತ್ತಿದೆ ಎಂದು ಖ್ಯಾತ ಪರಿಸರ ಚಿಂತಕ ನಾಗೇಶ ಹೆಗಡೆ ಆತಂಕ ವ್ಯಕ್ತಪಡಿಸಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಗತ್ತು ಎದುರಿಸುತ್ತಿರುವ ಪರಿಸರದ ಬಿಕ್ಕಟ್ಟಿನ ಕುರಿತು ಮಾತನಾಡಿ, ಬಿಸಿ ಪ್ರಳಯ, ವೈರಸ್ ಪ್ರಳಯ, ಭೋಗ ಪ್ರಳಯಗಳು ಜಗತ್ತನ್ನು ತಲ್ಲಣಗೊಳಿಸುತ್ತಿದೆ. ಜಾಗತಿಕ ತಾಪಮಾನದ ಏರಿಕೆಯಿಂದ ಬಾಂಬ್ ಸೈಕ್ಲೋನ್ ಗಳು ಜೀವ ವಿನಾಶಕ್ಕೆ ಕಾರಣವಾಗುತ್ತಿವೆ ಎಂದು ವಿವರಿಸಿದರು. ಸೂರ್ಯನ ತಾಪಮಾನ ವ್ಯರ್ಥ ವಾಗದ ಹಾಗೆ ಸದ್ಬಳಕೆಯಾಗಬೇಕಿದೆ ಎಂದು ವಿವರಿಸಿದರು. ನಾವೆಲ್ಲ ಪ್ರಜ್ಞಾವಂತ ನಾಗರಿಕರಾಗಿ ಸೈಕ್ಲಿಂಗ್ ಎಕಾನಮಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿ ಕತೆಗಾರ ಶ್ರೀಧರ ಬಳಗಾರ ನಾಗೇಶ ಹೆಗಡೆಯವರ ಇತ್ತೀಚಿನ ‘ಪೂಚಂತೇ ಗ್ರೇಟ್ ಯಾಕಂತೆ’ ಪುಸ್ತಕದ ಕುರಿತಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಈಗಿರುವ ಪಠ್ಯಗಳನ್ನು ಪರಿಷ್ಕರಣೆಗೊಳಿಸಬೇಕು. ಪ್ರಕೃತಿಯ ಕುರಿತು ಬೆರಗು, ಆನಂದ, ಕುತೂಹಲ ಮೂಡಿಸುವ ಪಠ್ಯಗಳನ್ನು ಇಂದು ಅಳವಡಿಸಬೇಕಿದೆ ಎಂದರು.
ಕಾರ್ಯಕ್ರಮನ್ನು ಐಕ್ಯ ಹಾಗೂ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಅಡಿಯಲ್ಲಿ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯೆ ವಿಜಯಾ ನಾಯ್ಕ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಮೂರ್ತಿ ಐ.ಆರ್., ನಾಗೇಶ ಹೆಗಡೆಯವರ ಧರ್ಮ ಪತ್ನಿ ರೇಖಾ, ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಬಿ.ಎಂ. ಇದ್ದರು.