ಶಿರಸಿ: ರಾಜ್ಯ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಅಡಿಕೆ ಆಮದು ವಿಷಯದ ಚರ್ಚೆಯ ವೇಳೆ ಅಡಿಕೆ ಬೇಸಾಯಗಾರರ ಭವಿಷ್ಯದ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಸಚಿವರ ಈ ಹೇಳಿಕೆಯು ಪರ- ವಿರೋಧಗಳ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಪ್ರತಿಕ್ರಯಿಸಿದ ಕಿಸಾನ್ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಡವೆ, ಅಡಿಕೆ ಬೆಳೆಗಾರರ ರಾಜ್ಯ ಮಟ್ಟದ ಸಂಸ್ಥೆಯಾದ ಅಡಿಕೆ ಟಾಸ್ಕ್ ಪೋರ್ಸ ಅಧ್ಯಕ್ಷರಾಗಿರುವ ಆರಗ ಜ್ಞಾನೇಂದ್ರ ಅವರ ಮಾತುಗಳು ಈಗಿರುವ ರಾಜ್ಯ ಸರ್ಕಾರ ಎಷ್ಟು ಅಶಕ್ತ ಸರ್ಕಾರ ಎಂಬುದನ್ನು ಎತ್ತಿ ತೋರ್ಪಡಿಸಿದೆ. ಸಾಂಪ್ರದಾಯಿಕ ಅಡಿಕೆ ಬೇಸಾಯದ ಪ್ರದೇಶದ ರೈತರು ಹಾಗೂ ಬಯಲು ಪ್ರದೇಶದ ನೀರಾವರಿ ಯೋಜನೆ ಪ್ರದೇಶದ ಅಡಿಕೆ ರೈತರು ಎಂದು ವಿಂಗಡಿಸಿದ ಸಚಿವರು ಸಮಸ್ಯೆಯ ಅರಿವಿದ್ದು ಏನು ಮಾಡಲಾಗದ, ಪರಿಹಾರವಿಲ್ಲದ ಅಸಹಾಯಕತೆಯ ಹೇಳಿಕೆ ನೀಡಿದ್ದು ಇದು ‘ಡಬಲ್ ಎಂಜಿನ್’ ಸರ್ಕಾರದ ಹೊಣೆಗೇಡಿತವನ್ನು ಪ್ರದರ್ಶಿಸಿದೆ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ರಕ್ಷಣೆಗೆ ಬೇಕಾದ ಯಾವುದೇ ಚಿಂತನೆಯು ಇವರಲ್ಲಿ ಇಲ್ಲ ಹಾಗೂ ಇವರಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ರಕ್ಷಣೆಯು ದೊರಕುವುದಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಸಾಕ್ಷಿ.
ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಬರುವ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಶಾಸಕರು, ಸಚಿವರು, ಸಂಸದರೇ ಹೆಚ್ಚಿದ್ದು ಈ ಕುರಿತು ಕೇಂದ್ರದಿಂದ ಅಗತ್ಯ ಕಾನೂನು, ಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಇದರ ಫಲವಾಗಿ ಬಡ ಮತ್ತು ಚಿಕ್ಕ ಹಿಡುವಳಿದಾರ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಭವಿಷ್ಯ ಸಂಕಷ್ಟದಲ್ಲಿದೆ. ಇಂತಹ ರೈತ ವಿರೋಧಿ ಹಾಗೂ ಹಣವಂತರ ಪರವಾದ ಸರ್ಕಾರ, ನೀರಾವರಿ ಪ್ರದೇಶದಲ್ಲಿ ಅಡಿಕೆಯನ್ನು ನೂರಾರು ಎಕರೆಗಟ್ಟಲೆ ಒಬ್ಬೊಬ್ಬ ರೈತ ಅಡಿಕೆ ಬೇಸಾಯ ಮಾಡಿದರೂ ನಿಯಂತ್ರಿಸದೆ ಕಣ್ಣು ಮುಚ್ಚಿಕೊಂಡು ಈಗ ಅಸಹಾಯಕತೆ ತೋರುತ್ತಿರುವದು ಹಾಗೂ ಅಡಿಕೆ ಬೆಳೆಗಾರ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದ್ದು ಅಡಿಕೆ ಬೆಳೆಗಾರರಿಗೆ ಬಿಜೆಪಿ ಸರ್ಕಾರ ಮಾಡಿರುವ ದ್ರೋಹವಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.