ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್ ಸಹಯೋಗದೊಂದಿಗೆ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತೆಯ ಕುರಿತು ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀರಾಮ ಸ್ಟಡಿ ಸರ್ಕಲ್‌ನ ನಿರ್ದೇಶಕ ಸೂರಜ್ ನಾಯ್ಕ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿದೆ. ಸೂಕ್ತ ಸಿದ್ಧತೆಯಿಂದ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಕಿವಿಮಾತನ್ನು ಹೇಳಿದರು. ಐ.ಎ.ಎಸ್, ಕೆ.ಎ.ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತೆ ಹೇಗಿರಬೇಕು ಹಾಗೂ ಹೇಗೆ ಯಶಸ್ಸನ್ನು ಗಳಿಸಲು ಸಾಧ್ಯವೆನ್ನುವುದನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು ಹಾಗೂ ಬಿಬಿಎ-ಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ್ ಭಟ್ ಅವರು ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ದಿನ- 2023ರ ಪ್ರಯುಕ್ತ ನಡೆಯುವ ರಸಪ್ರಶ್ನೆ ಸ್ಪರ್ಧೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.