ಯಲ್ಲಾಪುರ: ದಿ.ಎನ್.ಎಸ್.ಹೆಗಡೆ ಕುಂದರಗಿಯವರು ಹಿಡಿದ ಕೆಲಸವನ್ನು ಪಟ್ಟು ಹಿಡಿದು ಮುಗಿಸದೇ ಬಿಡುತ್ತಿರಲಿಲ್ಲ ಎಂದು ಆರ್.ಎನ್.ಗೋರ್ಸಗದ್ದೆ ಹೇಳಿದರು.
ರಾಜರಾಜೇಶ್ವರಿ ಯಕ್ಷಗಾನ ಸಂಸ್ಥೆ, ಹಾಸಣಗಿ ಸೇವಾ ಸಹಕಾರಿ ಸಂಘ ಮೊದಲಾದ ಸಂಘಟನೆಗಳು ಇತ್ತೀಚೆಗೆ ಅಗಲಿದ ತಿಮ್ಮಪ್ಪ ಭಾಗವತ ಬಾಳೆಹದ್ದ, ಎನ್.ಎಸ್.ಹೆಗಡೆ ಕುಂದರ್ಗಿ ಅವರುಗಳಿಗೆ ಮಂಚಿಕೇರಿಯ ಎಚ್.ಎಸ್.ಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈಗೊಂದು ತಿಂಗಳ ಹಿಂದೆ ಎನ್.ಎಸ್.ಹೆಗಡೆಯವರ ಮನೆಗೆ ಹೋದಾಗ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ನಾವಿಬ್ಬರೂ ಮಾತಾಡಿದ್ದೆವು. ನಾನು ಅದೆಷ್ಟೋ ಸಂದರ್ಭದಲ್ಲಿ ಅವರ ಆತ್ಮೀಯ ಮಾರ್ಗದರ್ಶನವನ್ನು ನಿಭಾಯಿಸಿದ್ದು ಈಗ ನೆನಪಾಗುತ್ತಿದೆ. ಅವರು ನಮ್ಮ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಥಮ ಕಾರ್ಯದರ್ಶಿಯಾಗಿದ್ದರು. ತಿಮ್ಮಪ್ಪ ಭಾಗವತರದು ದುರಂತ ಸಾವು. ವಯಸ್ಸಾದ ಹಿರಿಯರ ಎದುರು ಮಕ್ಕಳು ಸಾಯಬಾರದು. ಅವರ ಕುಟುಂಬಕ್ಕೆ ಆ ಸಾವಿನ ನೋವನ್ನು ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂದೂ ಹೇಳಿದರು.
ರಂಗಸಮೂಹ ಮಂಚೀಕೇರಿಯ ಆರ್.ಎನ್.ಧುಂಡಿ, ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳ್ಕೊಪ್ಪ, ರಾಯಸಂನ ಜಿ.ಟಿ.ಭಟ್ಟ ಬೊಮ್ನಳ್ಳಿ, ಆರ್.ಜಿ.ಹೆಗಡೆ ಬೆದೆಹಕ್ಲು, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ನಾಗರಾಜ ಜೋಶಿ, ರಾಯಸಂನ ಕಾರ್ಯದರ್ಶಿ ವಿಶ್ವನಾಥ ಹೆಗಡೆ ಭಾವನಕೊಪ್ಪ ಮೊದಲಾದವರು ಅಗಲಿದ ಮಹನೀಯರಿಗೆ ನುಡಿನಮನ ಸಲ್ಲಿಸಿದರು.
ಹಾಸಣಗಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಲು, ಸಂವಹತಿಯ ಅಧ್ಯಕ್ಷ ಜಿ.ಆರ್.ಭಟ್ಟ ಹಾಸಣಗಿ, ಕಲಾವಿದರಾದ ಜಿ.ಜಿ.ಹೆಗಡೆ ಕನೇನಳ್ಳಿ, ಗುಡ್ಡೆ ತಮ್ಮಣ್ಣ, ನಾರಾಯಣ ಭಾಗವತ ಬಾಳೆಹದ್ದ, ನಾಟಕ ನಿರ್ದೇಶಕ ವಾಸುಕಿ ಹೆಗಡೆ,ಯಲ್ಲಾಪುರ ಗ್ರಾ.ಪಂ.ಸ.ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿಯಡಳ್ಳಿ, ಗ.ರಾ.ಭಟ್ಟ ಮೊದಲಾದವರು ಇದ್ದರು.