ಬೆಳಗಾವಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದ ಕುರಿತು ವಿಧಾನ ಪರಿಷತ್‌ನಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪರಿಸ್ಥಿತಿ ನಿಯಂತ್ರಣಕ್ಕೆ ವಿಫಲವಾಗಿರುವ ಆರೋಪದಡಿ ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪುತ್ತೂರು ತಾಲ್ಲೂಕಿನ ಕಾಣಿಯೂರಿನಲ್ಲಿ ಭಜನೆ ಮತ್ತು ಭಜಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಮನೆ ಮೇಲೆ ದಾಳಿಮಾಡಿದ 15ರಿಂದ 20 ಮಂದಿ ಗೂಂಡಾಗಳು ಬಾಂಬ್ ಸ್ಫೋಟಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಒಂದು ಸಂಘಟನೆಯವರು ಈ ರೀತಿ ದಾಳಿ ನಡೆಸಿದ್ದಾರೆ. ಆದರೆ, ದಾಳಿ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅದೇ ರೀತಿ ಸುರತ್ಕಲ್‌ನ ಕಾಟಿಪಳ್ಳದಲ್ಲಿ ಜಲೀಲ್ ಎಂಬ ವ್ಯಾಪಾರಿಯನ್ನು ಕೊಲೆ ಮಾಡಲಾಗಿದೆ. ಇಂತಹ ಘಟನೆಗಳು 20 ವರ್ಷಗಳಿಂದಲೂ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿವೆ. ರಾಜ್ಯದ ಇತರ ಭಾಗಗಳಲ್ಲಿ ಅಪರಾಧ ಕೃತ್ಯಗಳು ನಡೆದಾಗ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವ ಸರ್ಕಾರ, ಕರಾವಳಿಯಲ್ಲಿ ಏಕೆ ಅಂತಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಪೊಲೀಸರು ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡದಂತೆ ಅವರ ಕೈಕಟ್ಟಿ ಹಾಕಲಾಗಿದೆ. ಈ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಈ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ನಿಯಮ 330ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.