ಕಾರವಾರ: ಮೆ.ಕೆ.ಎನ್.ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 2 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾಕಂಬಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅಬಕಾರಿ ಇಲಾಖೆ ಅನುಮತಿ ನೀಡಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಹೀಗಾಗಿ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಕ್ಕರೆ ಉದ್ಯಮದ ಉಪ ಉತ್ಪನ್ನವಾಗಿರುವ ಕಾಕಂಬಿಯ ಉತ್ಪಾದನೆ, ಪೂರೈಕೆ, ಹಂಚಿಕೆ, ಆಮದು ಮತ್ತು ರಪ್ತಿನ ಮೇಲೆ ಸರ್ಕಾರ ಸಂಪೂರ್ಣ ನಿಯಂತ್ರಣ ಹೊಂದಿದೆ. ಪ್ರತಿಯೊಂದು ಸಕ್ಕರೆ ಕಾರ್ಖಾನೆಗಳೂ ಕಬ್ಬು ಅರೆದ ಪ್ರಮಾಣಕ್ಕೆ ಅನುಸಾರವಾಗಿ ಕಾಕಂಬಿ ಉತ್ಪಾದನೆಯ ವಿವರಗಳನ್ನು ಕಾಲಕಾಲಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕು. ಅನುಮತಿ ಇಲ್ಲದ ಕಾಕಂಬಿಯ ಉತ್ಪಾದನೆ, ಸಂಗ್ರಹ, ಸಾಗಣೆ, ಸ್ವಾಧೀನತೆ, ಮಾರಾಟ, ವಿಲೇವಾರಿ, ಖರೀದಿ ಮಾಡುವುದರ ಮೇಲೆ ಸರ್ಕಾರ ಪ್ರತಿಬಂಧ ಹೇರಿದೆ. ಕಾಕಂಬಿ ರಪ್ತಿನಲ್ಲಿ ಮುಂಬಯಿ ಮೂಲದ ಕೆ.ಎನ್.ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಹೊರದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಅನುಮತಿ ನೀಡಲು ಅರ್ಜಿ ಸಲ್ಲಿಸಿದೆ. ಆದರೆ ಕಂಪನಿಯು ಒಪ್ಪಿಗೆಗೆ ಬೇಕಾಗುವ ಸಮರ್ಪಕ ದಾಖಲೆಗಳನ್ನು ನೀಡದೆ ಅನುಮತಿ ಪಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಅಬಕಾರಿ ಆಯುಕ್ತರು ಅರ್ಜಿಯ ಪರಿಶೀಲನೆಯಲ್ಲಿ ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ಅನುಸರಿಸದೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಟ್ಟಿದೆ. ಸರ್ಕಾರದ ಮಟ್ಟದಲ್ಲಿಯೂ ಕೂಡ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸದೆ ಮತ್ತು ಯಾವ ಬಂದರು ಮೂಲಕ ಈ ಕಾಕಂಬಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ ಎನ್ನುವುದನ್ನು ನಿರ್ದಿಷ್ಟವಾಗಿ ಸೂಚಿಸದಿದ್ದರೂ ಕೂಡ ಅ.12ರಂದು ಅಬಕಾರಿ ಸಚಿವರ ಅನುಮೋದನೆಗೆ ಮಂಡಿಸಿದೆ. ಪ್ರಸ್ತಾವನೆಯ ಲೋಪದೋಷಗಳ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೇಳದೆ ಪ್ರಸ್ತಾವನೆಗೆ ಅಬಕಾರಿ ಸಚಿವರು ಅನುಮೋದನೆ ನೀಡಿದ್ದಾರೆ. ಮಾರನೇ ದಿನ ‘ದಿ ಫೈಲ್’ ಮಾಧ್ಯಮ ಸದರಿ ಕಂಪನಿಗೆ ಸೂಕ್ತವಾಗಿ ನಿಯಮಾನುಸಾರ ಪರಿಶೀಲಿಸದೆ ತುರಾತುರಿಯಲ್ಲಿ ಕಾಕಂಬಿ ರಫ್ತಿಗೆ ಅನುಮೋದನೆ ನೀಡಿರುವ ಬಗ್ಗೆ ಈ ವಿಚಾರದಲ್ಲಿ ಕಿಕ್‌ಬ್ಯಾಕ್ ನಡೆದಿದೆ ಎಂಬುದಾಗಿ ಆರೋಪ ಮಾಡಿತ್ತು. ಅಂದು ಅಬಕಾರಿ ಸಚಿವರು ಪತ್ರಿಕಾಗೋಷ್ಠಿ ಕರೆದು, ತನಗೆ ಅಂತಹ ಕಡತದ ಬಗ್ಗೆ ತಿಳಿದಿಲ್ಲ ಮತ್ತು ಅದು ತನಗೆ ಬಂದೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ತಮ್ಮ ನೆರೆಯ ರಾಜ್ಯಗಳ ಬಂದರುಗಳ ಮೂಲಕ ಕಾಕಂಬಿ ರಫ್ತು ಮಾಡಲು ಅನುಮತಿ ನೀಡುತ್ತಿಲ್ಲ. ಅರ್ಜಿದಾರ ಕಂಪನಿಯು ಎಂ-2 ಲೆಸನ್ಸ್ ಇಲ್ಲದೆ ಸಲ್ಲಿಸಿರುವ ಅರ್ಜಿ ಇದಾಗಿದ್ದು, ಅಗತ್ಯ ದಾಖಲೆಗಳನ್ನು ಹಾಜರು ಪಡಿಸದೇ ಅನುಮತಿ ನೀಡಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
ಕರ್ನಾಟಕದ ಅಬಕಾರಿ ನೀತಿಯ ಪ್ರಕಾರ ಇಲಾಖೆಯ ಅಧಿಕಾರ ವ್ಯಾಪ್ತಿ ಕಛೇರಿ ಲಭ್ಯವಿಲ್ಲದ ಬಂದರು ಮೂಲಕ ಕಾಕಂಬಿಯನ್ನು ರಫ್ತು ಮಾಡಲು ಅವಕಾಶ ನೀಡುವಂತಿಲ್ಲ. ಅಲ್ಲದೆ, ಕರ್ನಾಟಕ ರಾಜ್ಯದ ಹೊರಗೆ ಕಾಕಂಬಿಯನ್ನು ಸಾಗಿಸಲು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸುತ್ತಿದ್ದವು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರ ಕಂಪನಿಯು ಕರ್ನಾಟಕದಿಂದ ಗೋವಾ ರಾಜ್ಯದ ಬಂದರಿಗೆ ಕಾಕಂಬಿ ಸಾಗಾಣಿಕೆ ಮಾಡಲು ಮಾಡಿದ ಮನವಿಯನ್ನು ಅಬಕಾರಿ ಆಯುಕ್ತರು ಶಿಫಾರಸ್ಸು ಮಾಡಿದ್ದು ಕಾನೂನಿನ ಉಲ್ಲಂಘನೆಯಾಗಿದೆ. ಕರ್ನಾಟಕದಿಂದ ಗೋವಕ್ಕೆ ಸಾಗಾಣಿಕೆ ಮಾಡಿ ಅಲ್ಲಿಂದ ಹೊರ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿರುವುದರಿಂದ ಕರ್ನಾಟಕಕ್ಕೆ ಹಲವಾರು ರೀತಿಯಲ್ಲಿ ನಷ್ಟ ಉಂಟಾಗಿರುತ್ತದೆ. ಅಬಕಾರಿ ಆಯುಕ್ತರ ಈ ನಡೆಯಿಂದ ಕರ್ನಾಟಕ ಸರ್ಕಾರದ ಬಂದರು ಇಲಾಖೆಗೆ ಸುಮಾರು ರೂ.2 ಕೋಟಿ ಆದಾಯ ನಷ್ಟವಾಗಿದೆ. ರಾಜ್ಯದ ಟ್ಯಾಂಕರ್‌ಗಳ ಮಾಲೀಕರು, ಪೆಟ್ರೋಲ್ ಬಂಕ್‌ಗಳು, ಕಸ್ಟಂ ಹೌಸ್ ಏಜಂಟರುಗಳು, ಸ್ಟೀಮರ್ ಏಜಂಟರುಗಳು, ಕರ್ನಾಟಕ ರಾಜ್ಯದ ಬಂದರು ಚಟುವಟಿಕೆಗಳಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡುವ ಕರ್ನಾಟಕ ರಾಜ್ಯದ ಕೆಲಸಗಾರರು ಮುಂತಾದವರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.