ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದೋನ್ನತಿ ಹೊಂದಿದ ಸಹ ಪ್ರಾಧ್ಯಾಪಕರಿಗೆ ಸನ್ಮಾನ ಹಾಗೂ ವರ್ಗಾವಣೆಯಾಗುತ್ತಿರುವ ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭವು ಶನಿವಾರ ಕಾಲೇಜಿನ ಸಭಾಭವನದಲ್ಲಿ ಜರುಗಿತು.
ಕಾಲೇಜಿನ ಸಹ ಪ್ರಾಧ್ಯಾಪಕರಾಗಿದ್ದ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕದ, ಸಹ ಪ್ರಾಧ್ಯಾಪಕರುಗಳಾದ ಡಾ.ಬಸವರಾಜ ಅಕ್ಕಿ, ಡಾ.ವಿನಯಾ ಜಿ.ನಾಯಕ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪ್ರಾಧ್ಯಾಪಕ ಪ್ರೊ.ಎಸ್.ವಿ.ಚಿಂಚಣಿ ಇವರು 30 ವರ್ಷಗಳ ಸೇವೆಯನ್ನು ಪೂರೈಸಿದ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು. ಬೈಲಹೊಂಗಲದ ಕಾಲೇಜಿಗೆ ವರ್ಗಾವಣೆಗೊಂಡ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದಕುಮಾರ ಮೇತ್ರಿ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಪಿಎಚ್‌ಡಿ ಪದವಿಗೆ ಭಾಜನರಾದ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪರವಿನ ಎಂ.ಶೇಖ್ ಅವರಿಗೆ ಕಾಲೇಜಿನಲ್ಲಿ ಸನ್ಮಾನಿಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುದ ಅವರು ಸನ್ಮಾನಿತರಾದ ಎಲ್ಲರಿಗೂ ಶುಭ ಹಾರೈಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ತಿಳಿಸಿದರು. ಕಾಲೇಜು ಜೀವನ ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗುವುದರ ಜೊತೆಗೆ ಸಾಮಾಜಿಕವಾದ ಜ್ಞಾನ ಮಟ್ಟವನ್ನು ವಿಸ್ತಾರಗೊಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಸುನೀತಾ ಜೋಗ, ನಿಶಾಥ ಷರೀಫ, ತಸ್ಲೀಮಾ ಜೋರುಂ, ಅಧೀಕ್ಷಕರಾದ ದೇವಕಿ ಹಾಗೂ ಎಲ್ಲ ಅತಿಥಿ ಉಪನ್ಯಾಸಕರು ಹಾಜರಿದ್ದರು. ಡಾ.ಮಂಜುನಾಥ ಚಲವಾದಿ ಸ್ವಾಗತಿಸಿ, ವಂದಿಸಿ ಹಾಗೂ ಕಾರ್ಯಕ್ರಮ ನಿರೂಪಿಸಿದರು.