ದಾಂಡೇಲಿ: ಜೈನ ಧರ್ಮದ ಪರಮೋಚ್ಛ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಪ್ರವಾಸಿ ತಾಣ ಎಂದು ಆದೇಶ ಹೊರಡಿಸಿರುವುದು ಖಂಡನೀಯ. ಈ ಕೂಡಲೆ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ತಹಶೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಯವರಿಗೆ ಮತ್ತು ಜಾರ್ಖಂಡ್ ರಾಜ್ಯ ಮುಖ್ಯಮಂತ್ರಿಯವರಿಗೆ ಮನವಿ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಕಾರ್ಯದರ್ಶಿ ಸಂದೇಶ್ ಎಸ್.ಜೈನ್, ಈ ದೇಶದ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಜೈನರ ಕೊಡುಗೆ ಅಪಾರ. ಯಾವುತ್ತು ಏನನ್ನು ಬೇಡಿಕೆಯಿಡದೆ ಸ್ವಾತಂತ್ರ್ಯ ಸ್ವಾಬಲಂಬಿಯಾಗಿ ಬದುಕು ಕಟ್ಟಿಕೊಂಡು ಈ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಜೈನರ ಆರಾಧ್ಯ ಮತ್ತು ಅತ್ಯಂತ ನಂಬಿಕೆಯ ಪರಮ ಪುಣ್ಯ ಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿಸಲು ಹೊರಟಿರುವುದು ಅತ್ಯಂತ ನೋವಿನ ಸಂಗತಿ ಹಾಗೂ ತೀವ್ರ ಖಂಡನೀಯ. ಈ ಆದೇಶವನ್ನು ಕೂಡಲೆ ಹಿಂಪಡೆಯದಿದ್ದಲ್ಲಿ ಹಾಗೂ ಈ ಆದೇಶವನ್ನು ಹಿಂಪಡೆಯುವವರೆಗೆ ಜೈನ ಬಾಂಧವರು ರಾಷ್ಟ್ರವ್ಯಾಪಿ ಮುಂಬರಲಿರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸಬೇಕಾದ ನಿಟ್ಟಿನಲ್ಲಿ ಮುಂದಡಿಯಿಡಬೇಕಾದಿತೂ ಎಂದು ಎಚ್ಚರಿಕೆಯನ್ನು ನೀಡಿದರು.
ಜೈನ ಸಮಾಜ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷ ಮಹಾವೀರ ನರ‍್ಲೇಕರ್ ಮತ್ತು ಪ್ರಮುಖರಾದ ಎಂ.ಬಿ.ನಾಗೇಂದ್ರನಾಥ್, ಅತೀ ಪುರಾತನವಾದ ಮತ್ತು 20 ತೀರ್ಥಂಕರರು ಮೋಕ್ಷವನ್ನು ಹೊಂದಿದ ಪರಮ ಪುಣ್ಯ ಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿತಾಣವನ್ನಾಗಿ ಘೋಷಣೆ ಮಾಡಿ, ಆ ಕ್ಷೇತ್ರದ ಘನತೆಗೆ ಚ್ಯುತಿ ತರುವ ಕೆಲಸವಾಗುತ್ತಿರುವುದು ಇಡೀ ಜೈನ ಸಮಾಜದ ನಂಬಿಕೆಯ ಮೇಲೆ ಪ್ರಬಲವಾದ ಅಸ್ತ್ರ ಬಳಸಿದಂತಾಗಿದೆ. ಈ ಕೂಡಲೆ ಈ ಆದೇಶವನ್ನು ಹಿಂಪಡೆದು ಜೈನರ ಆರಾಧ್ಯ ಕ್ಷೇತ್ರಕ್ಕೆ ಎಲ್ಲಿಯೂ ಧಕ್ಕೆಯನ್ನು ತರಬಾರದೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಮಹಾವೀರ ಬಂಡಿ, ಅಭಯ್.ಎಸ್.ಸದಲಗಿ, ಎಸ್.ಡಿ.ದೇವಕ್ಕಿ, ಉದಯ್.ಎಂ.ಶಾ, ಕಲ್ಲಪ್ಪ ಪಾಟೀಲ್, ಆರ್.ಎಂ. ಗದ್ದಿಗೆವಾಡ, ಮಹಾವೀರ ಟೋಪನ್ನವರ, ಶೋಭಾ ನಾಗೇಂದ್ರನಾಥ್, ಭೂಪೇಂದ್ರ ಜೈನ್, ಶೃತಿ.ಎಂ.ಘಾಳಿ, ರವಿ ಜೈನ್, ಕಲಾವತಿ ಬಂಡಿ, ಎನ್.ಕೆ.ಬನ್ಸಾಲಿ, ಶೃತಿ ಪತಗುಂಡಿ, ಎಸ್.ಟೋಪನ್ನವರ, ಸಂತೋಷ್ ಜೈನ್, ಶ್ರೀಕಾಂತ ದೇವಕಿ, ಜಯಶ್ರೀ ದೇವಕಿ, ಅರ್ಚನಾ ನರ‍್ಲೇಕರ್, ರಾಜಶ್ರೀ. ಸದಲಗಿ, ಲೀಲಾ ಬನ್ಸಾಲಿ, ನಿಶಾ ಜೈನ್, ನೀಲ್, ಉಜ್ವಲಾ ಉದಯ್ ಶಾ, ಸನ್ಮತಿ ದೇವೇಕರ ಹಾಗೂ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಮತ್ತು ಜೈನ ಸಮಾಜದವರು ಉಪಸ್ಥಿತರಿದ್ದರು.