ಶಿರಸಿ: ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಿತು. ಸದಾ ಆಟದ ಜೊತೆಗೆ ಪಠ್ಯ- ಪಾಠದೊಂದಿಗೆ ಕಾಲಕಳೆಯುತ್ತಿದ್ದ ಮಕ್ಕಳು ತಾವೇ ಸಭೆಯ ಅಧ್ಯಕ್ಷ- ಉಪಾಧ್ಯಕ್ಷರಾಗಿ ವೇದಿಕೆ ಮೇಲೆ ಕುಳಿತು ಗ್ರಾಮ ಸಭೆ ನಡೆಸಿದರು. ಬಿಸಲಕೊಪ್ಪ ಕ್ಲಸ್ಟರ್ ವ್ಯಾಪ್ತಿಯ 15 ಶಾಲೆಗಳ 40ಕ್ಕೂ ಅಧಿಕ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಶಾಲೆಗಳ ಕುಂದು- ಕೊರತೆಗಳ ಬಗ್ಗೆ ಸಭೆಯಲ್ಲಿ ಗಮನ ಸೆಳೆದರು. ಶಿಕ್ಷಣ, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಮಹಿಳಾ ಸ್ವಾಂತನ ಕೇಂದ್ರ, ಮಕ್ಕಳ ಸಹಾಯವಾಣಿಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತು ಮಾತನಾಡಿದರು. ಆರಂಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಪರುಶುರಾಮ ಮಳವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳೆ ಮತ್ತು ಮಕ್ಕಳ ಹಕ್ಕು ಕರ್ತವ್ಯಗಳ ಕುರಿತು ವಕೀಲ ಶಿವರಾಯ್ ದೇಸಾಯಿ ವಿಶೇಷ ಉಪನ್ಯಾಸ ನೀಡಿದರು. 15 ಶಾಲೆಯಿಂದ ಬಂದ ಒಒಬ್ಬೊಬ್ಬ ವಿದ್ಯಾರ್ಥಿಗಳು ಸಭಾವೇದಿಕೆ ಅಲಂಕರಿಸಿದರೆ, ಅವರ ಹಿಂಬದಿ ಸಾಲಿನಲ್ಲಿ ಪಂಚಾಯತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷ ನರೇಂದ್ರ ಶಾಸ್ತ್ರಿ, ನೋಡೆಲ್ ಅಧಿಕಾರಿ ಸಿಡಿಪಿಓ ದತ್ತಾತ್ರಯ ಭಟ್ಟ್ ಉಪಸ್ಥಿತರಿದ್ದರು. ಸಭೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಶಾ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘಗಳ ಸದಸ್ಯೆಯರು, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷರುಗಳು ಪಾಲ್ಗೊಳ್ಳುವುದರ ಮೂಲಕ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಅರ್ಥಪೂರ್ಣವಾಗಿ ನಡೆಯಿತು.