ಶಿರಸಿ: ಬೆಂಗಳೂರು ವ್ಯಾಪ್ತಿಯ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಸಚಿವ ಬಿ.ಶ್ರೀರಾಮಲುರವರು ಬೆಳಗಾವಿಯ ಅಧಿವೇಶನದಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದು ಶ್ರೀಮಾರಿಕಾಂಬಾ ಆಟೋ ಚಾಲಕ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.
ಉತ್ತರ ಕನ್ನಡದಲ್ಲಿ 7,000ಕ್ಕೂ ಹೆಚ್ಚು ಆಟೋ ರಿಕ್ಷಾಗಳಿದ್ದು, ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆಟೋರಿಕ್ಷಾವನ್ನು ಚಾಲನೆ ಮಾಡಿಕೊಂಡು ಸರಿಯಾದ ಬಾಡಿಗೆ ಇಲ್ಲದೆ ಬಂದ ಹಣದಲ್ಲಿ ಆಟೋ ಚಾಲಕ- ಮಾಲಕರಿಗೆ ಜೀವನವನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಸೇರಿ 8 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳಿದ್ದು, ತೆರಿಗೆ, ಇನ್ಶುರೆನ್ಸ್ ಇತರೆ ರೂಪಗಳಲ್ಲಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಕೋಟಿಗಿಂತ ಹೆಚ್ಚಿನ ಹಣವು ತೆರಿಗೆ ರೂಪದಲ್ಲಿ ಸಂದಾಯವಾಗುತ್ತಿದೆ. ಕಾರಣ ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಚಾಲಕರಲ್ಲಿ ಹಾಗೂ ಇತರ ಊರುಗಳಲ್ಲಿರುವ ಆಟೋ ಮತ್ತು ಕ್ಯಾಬ್ ಚಾಲಕರಲ್ಲಿ ತಾರತಮ್ಯ ಮಾಡದೆ ಇಡೀ ರಾಜ್ಯಾದ್ಯಂತ ಆಯುಷ್ಮಾನ್ ಯೋಜನೆಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿದೆ.
ಬೆಂಗಳೂರು ನಗರ ವ್ಯಾಪ್ತಿಯ ಆಟೋ ಚಾಲಕ ಮತ್ತು ಕ್ಯಾಬ್ ಚಾಲಕರಿಗೆ ಆರ್ಥಿಕವಾಗಿ ಹಿಂದುಳಿದ ಅರ್ಹರಿಗೆ ವಸತಿ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯೋಜನೆಯನ್ನು ಸಹ ರಾಜ್ಯಾದ್ಯಂತ ವಿಸ್ತರಿಸಬೇಕು. ಆಟೋ ಚಾಲಕ ಮತ್ತು ಮಾಲಕರನ್ನು ಸಹ ಕಾರ್ಮಿಕರ ವ್ಯಾಪ್ತಿಗೆ ಸೇರಿಸಿ ಅವರಿಗೂ ಸಹ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳು ಸಿಗುವಂತಾಗಬೇಕು. ಈ ಬಗ್ಗೆ ಈ ಹಿಂದೆ ಸಹ ಜಿಲ್ಲೆಯ ಶಾಸಕರಲ್ಲಿ, ಕಾರ್ಮಿಕ ಸಚಿವರಲ್ಲಿ, ವಿನಂತಿಸಿದ್ದು, ಆ ಸಮಯದಲ್ಲಿ ಕಾರ್ಮಿಕ ಸಚಿವರು ಮನವಿಗೆ ಸ್ಪಂದಿಸಿ ಸವಲತ್ತುಗಳನ್ನು ದೊರಕಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಈವರೆಗೆ ಅದು ಭರವಸೆಯೇ ಆಗಿ ಉಳಿದಿರುವುದು ವಿಷಾದಕರ ಸಂಗತಿ. ಆದ್ದರಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.