ಜೊಯಿಡಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಇದು ಉತ್ತಮ ಕಾರ್ಯಕ್ರಮವಾಗಿದೆ. ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ವಿಜಯಲಕ್ಷ್ಮಿ ರಾಯಕೋಡ ಹೇಳಿದರು.
ಅವರು ತಾಲೂಕಿನ ನಾಗೋಡಾ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಗೋಡಾ ಶಾಲೆಯಲ್ಲಿ ಗಿಡ ನೆಟ್ಟು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕೆಂದಿಲ್ಲ, ಜನರ ಸಮಸ್ಯೆಗಳಿಗೆ ಸ್ವಂದಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳ ಮೂರನೆ ಶನಿವಾರದಂದು ಈ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಒಂದು ಕಡೆ ಜಿಲ್ಲಾಧಿಕಾರಿಗಳು ಹೋಗಬಹುದು. ಉಳಿದ ತಾಲೂಕಿಗೆ ಉಪವಿಭಾಗಾಧಿಕಾರಿಗಳು ಅಥವಾ ಆಯಾ ತಾಲೂಕಿನ ತಹಶೀಲ್ದಾರರು ನೋಡಿಕೊಳ್ಳುತ್ತಾರೆ. ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಗೆ ಸಾರ್ವಜನಿಕರು ಬಂದಾಗ ಕೂಡಲೇ ಸ್ಪಂದಿಸಬೇಕು. ತಾಲೂಕಾ ಕಚೇರಿಯಲ್ಲಿ ಜನರ ಸ್ಪಂದನೆ ಸರಿಯಾಗಿಲ್ಲ ಎಂಬ ದೂರಿದೆ. ಆದ್ದರಿಂದ ಹೊಸ ತಹಶೀಲ್ದಾರ ಪ್ರಮೋದ ನಾಯ್ಕ ಅವರನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ತಾಲೂಕಿನ ಪರಿಸರ ತುಂಬಾ ಚೆನ್ನಾಗಿದೆ. ಇಲ್ಲಿರುವ ನೀವು ಭಾಗ್ಯವಂತರು. ನಿಮ್ಮ ಸಮಸ್ಯೆಗೆ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ, ಅವರಿಂದ ಸರಿಯಾದ ಸ್ಪಂದನೆ ಸಿಗದೇ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ. ಇಲ್ಲಿನ ಮಕ್ಕಳು ಶಿಕ್ಷಣಕ್ಕೆ ಬಹಳಷ್ಟು ದೂರ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಅಂತಹ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡಿ ಎಂದರು.
ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವರದಿ ಪ್ರಸ್ತುತಪಡಿಸಿದರು. ಗ್ರಾಮಸ್ಥರು ಕೆಲ ಅರ್ಜಿಗಳನ್ನು ನೀಡಿ ಸಮಸ್ಯೆ ಪರಿಹರಿಸಿಕೊಂಡರು. ರೈತ ಮಹಿಳೆಯರಿಗೆ ತೋಟಗಾರಿಕಾ ಇಲಾಖೆಯಿಂದ ತೆಂಗಿನ ಸಸಿ, ಇತರೆ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ದಿಗಂಬರ ದೇಸಾಯಿ, ಸದಸ್ಯರಾದ ಶ್ರೀಧರ ದಬ್ಗಾರ್, ಸುಭಾಷ ಮಾಂಜ್ರೇಕರ, ತಹಶೀಲ್ದಾರ ಪ್ರಮೋದ ನಾಯ್ಕ, ಇಓ ಆನಂದ ಬಡಕುಂದ್ರಿ, ಲೋಕೋಪಯೋಗಿ ಇಲಾಖೆಯ ಎಇಇ ವಿಜಯಕುಮಾರ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶಾರದಾ ಮರಾಠೆ, ತೋಟಗಾರಿಕಾ ಇಲಾಕೆಯ ಸಂತೋಷ ಎ., ವೈದ್ಯಾಧಿಕಾರಿಗಳು, ಇತರರು ಇದ್ದರು.