Slide
Slide
Slide
previous arrow
next arrow

4 ವರ್ಷಗಳ ನಂತರ ನಾ ಕಂಡ ಕೋಟಿತೀರ್ಥ: ಡಾ. ರವಿಕಿರಣ್ ಪಟವರ್ಧನ್

300x250 AD

eUK ವಿಶೇಷ: ಜನ-ಧ್ವನಿ: 2018 ರಲ್ಲಿ ಕಳುಹಿಸಿದ ಪತ್ರದ ನಂತರ ಕೋಟಿ ತೀರ್ಥಕ್ಕೆ ನಾನು ಭೇಟಿ ನೀಡಿದ್ದು 21 ಡಿಸೆಂಬರ್ 2022 . ಸುಂದರ ಸ್ವಚ್ಛ ಕೋಟಿ ತೀರ್ಥ ನೋಡಿ ಭಾರಿ ಖುಷಿ ಆಯಿತು. ಸಂಪೂರ್ಣ ಕೋಟಿತೀರ್ಥಕ್ಕೆ ಪಾದಯಾತ್ರೆಯಲ್ಲಿ ಒಂದು ಪ್ರದಕ್ಷಿಣೆ ಹಾಕಿ ಕೋಟಿತೀರ್ಥದ ಪವಿತ್ರ ಸ್ವಚ್ಛವಾದಂತಹ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಬಂದೆ. ಇದೊಂದು ಭಾರಿ ಸಮಾಧಾನದ ವಿಶೇಷ ಅನುಭವ. ಜೊತೆಗೆ ಕೆಲವು ಕಡೆ ಹುಲ್ಲು ಪಾಚಿ ಬೆಳೆಯಲು ಪ್ರಾರಂಭಿಸಿದ್ದು ನೋಡಿ ಬೇಸರವಾಯಿತು.
ಈಗಾಗಲೇ ಕೋಟಿತೀರ್ಥದಲ್ಲಿ ಮೀನಿನ ಮರಿ ಗಣನೀಯ ಪ್ರಮಾಣದಲ್ಲಿ ಕಾಣುವಂತಾಗಿದೆ. ಇದಕ್ಕಾಗಿ ಪಟ್ಟೆ ವಿನಾಯಕ ಯುವಕ ಮಂಡಳಿಯವರು ಸಹಕರಿಸಿದ ಮಾಹಿತಿ ಇದೆ. ಕೋಟಿ ತೀರ್ಥ ಸ್ವಚ್ಛತೆಯ ಈ ಭಗೀರಥ ಕಾರ್ಯದಲ್ಲಿ ಗ್ರಾಸ್ ಕಟ್ಟರ್ ಮೀನುಗಳನ್ನು ಮೀನುಗಾರಿಕಾ ಇಲಾಖೆ ತನ್ನ ಸ್ವಪ್ರೇರಣೆಯಿಂದ ಬಿಟ್ಟು ಪುಣ್ಯ ಸಂಚಯನ ಮಾಡಿಕೊಂಡು ತನ್ನ ಔರ್ದಾಯತೆಯನ್ನು ಮೆರೆಯಬೇಕಾಗಿದೆ. ಇದರಿಂದಾಗಿ ಈಗಾಗಲೇ ಬೆಳೆಯಲು ಪ್ರಾರಂಭಿಸಿದ ಹುಲ್ಲು ಪಾಚಿಗಳ ಕಡಿಮೆಯಾಗಿ ಅವುಗಳ ಬೆಳವಣಿಗೆ ನಿಯಂತ್ರಣದಲ್ಲಿ ಬರಬಹುದು ಅಂತ ಅನಿಸಿಕೆ.
ಗೋಕರ್ಣದ ಮಣ್ಣಿಗೆ ಹಾಗೂ ನ್ಯಾಯಾಲಯಕ್ಕೆ ಅವಿನಾಭಾವ ಸಂಬಂಧ ಇದ್ದದ್ದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಕೋಟಿತೀರ್ಥದ ಸ್ವಚ್ಛತೆಯ ವಿಷಯವಾಗಿ ಗ್ರಾಮ ಪಂಚಾಯಿತಿಯ ಟೆಂಡರ್ ಕರೆಯ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲು ಏರಿದೆ ಎನ್ನುವಂಥ ವಿಷಯ ತಿಳಿದು ಅಸಮಾಧಾನವಾಯಿತು. ಈ ಸ್ವಚ್ಛತೆ ವಿಷಯದಲ್ಲಿ ಆಸ್ತಿಕ ಮಹಾಜನರ ನಂಬಿಕೆಗೆ ಗ್ರಾಮ ಪಂಚಾಯತಿಯವರು ಸಹಕರಿಸಬೇಕಿದೆ. ಅಲ್ಲದೆ ಇಷ್ಟು ವರ್ಷಗಳ ಕಾಲ ಇದಕ್ಕೆ ಸಹಕರಿಸಿದ ಪಟ್ಟೆ ವಿನಾಯಕ ಯುವಕ ಮಂಡಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಈ ಸ್ವಚ್ಛತೆಯನ್ನು ಕಾದುಕೊಂಡು ಹೋದರೆ ಗ್ರಾಮ ಪಂಚಾಯಿತಿ ತನ್ನ ಔದಾರ್ಯತೆ ತೊರಿಸಿದಂತಾಗುತ್ತದೆ. ಈ ವಿಷಯವಾಗಿ ಗ್ರಾಮಪಂಚಾಯತ್, ಜಿಲ್ಲಾಡಳಿತ, ಮಾನ್ಯ ಸಭಾಪತಿ ಗಳು, ಮಾನ್ಯ ಶಾಸಕರು, ಮಾನ್ಯ ಸಂಸದರು ವಿಶೇಷ ಪ್ರಭಾವ ಬಳಸಿ ಸರ್ವಸಮ್ಮತ ಕೋಟಿತೀರ್ಥದ ಧಾರ್ಮಿಕ ಆಸ್ತೆಗೆ ದಕ್ಕೆ ಬರದಂತೆ ಮಾತುಕತೆಯ ಮೂಲಕ ತಕ್ಷಣ ಬಗೆಹರಿಸಲು ಪ್ರಮುಖ ಪ್ರಯತ್ನಕ್ಕೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷ ರು, ಜಿಲ್ಲಾಧ್ಯಕ್ಷರು ಗಮನಹರಿಸಿ ಈ ಸಮಸ್ಯೆಗೆ ಸಮಾಧಾನಕ್ಕೆ ಅಳಿಲು ಸೇವೆಯಾದರೂ ಮಾಡಬೇಕಿದೆ.
ಕೋಟಿ ತೀರ್ಥದ ಅಭಿವೃದ್ಧಿಗೆ ಟೆಂಡರ್ ಪಡೆದಂತಹ ಸಂಸ್ಥೆ ಉತ್ತಮ ಕಾರ್ಯ ನಿರ್ವಹಿಸಿದ ಮಾಹಿತಿ ಇದೆ. ಆದರೆ ವಿದ್ಯುತ್ ದೀಪ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ . ಏನೇ ಇರಲಿ ಈ ಕೋಟಿತೀರ್ಥ ಸ್ವಚ್ಛತೆಯನ್ನ ಕಾದುಕೊಂಡು ಹೋಗುವುದು ಎಲ್ಲಾ ಆಸ್ತಿಕ ಮಹಾಜನರ ಮಹತ್ವದ ವಿಷಯವಾಗಿದೆ, ಅಷ್ಟೇ ಅಲ್ಲ ಜವಾಬ್ದಾರಿಯೂ ಆಗಿದೆ. ಈ ಪಟ್ಟೆ ವಿನಾಯಕ ಯುವಕ ಮಂಡಳಿಗೆ ಗೋಕರ್ಣದ ಅಲ್ಲದೆ ಬೇರೆ ಬೇರೆ ಊರಿನ ಸ್ವಯಂಸೇವಕರು ಕೂಡ ಹೆಚ್ಚಿನ ಸಲಹೆ ಸೂಚನೆ ಹಾಗೂ ಸೇವೆಯನ್ನು ಈ ವಿಶೇಷ ಕೋಟಿ ತೀರ್ಥದ ಗೋಕರ್ಣ ಪುಣ್ಯಕ್ಷೇತ್ರಕ್ಕೆ ಒದಗಿಸಿ ಕೊಡುವ ಅವಶ್ಯಕತೆ ಇದೆ.

ಅಷ್ಟೇ ಅಲ್ಲದೆ ಗೋಕರ್ಣ ಊರಿನ ಸ್ವಚ್ಛತೆಯು ಅಷ್ಟೇ ಮಹತ್ವದ್ದಾಗಿದೆ. ಮುಖ್ಯ ಸಮುದ್ರ ಅಂಚಿನ ಸಮಾನಾಂತರ ರಸ್ತೆಯ ಭಾಗದಲ್ಲಿ ಕಸದ ರಾಶಿ ರಾಶಿ ಕಂಡುಬಂದಿದೆ. ಅಷ್ಟೇ ಅಲ್ಲ ಇದೇ ಭಾಗದಲ್ಲಿ ಹೊಲಸು ನೀರಿನ ಸಂಗ್ರಹಣೆಯೂ ಕೂಡ ಆದಂತಿದೆ. ಇದು ಗೋಕರ್ಣ ನಿವಾಸಿಗಳಿಗೆ ಹಾಗೂ ಬರುವಂತಹ ಪ್ರವಾಸಿಗರಿಗೆ ರೋಗರುಜಿನಕ್ಕೆ ಕಾರಣವಾಗಬಹುದು. ಅದಕ್ಕೆ ಸೂಕ್ತ ವೈಜ್ಞಾನಿಕ ಉಪಾಯವನ್ನು ಗ್ರಾಮ ಪಂಚಾಯಿತಿ ಹಾಗೂ ಕುಮಟಾ ತಾಲೂಕು ಪಂಚಾಯಿತಿ, ಜಿಲ್ಲಾಡಳಿತ ನೋಡಿಕೊಳ್ಳುವ ಅವಶ್ಯಕತೆ ಇದೆ. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಾರ್ಯಕ್ಕೆ ಮಾರ್ಗದರ್ಶನ ನೀಡಬಹುದಾಗಿದೆ.

ರಾಜ್ಯಸರ್ಕಾರ , ಕೇಂದ್ರ ಸರ್ಕಾರ ಕಾಶಿ, ಉಜ್ಜಯಿನಿ ಮಾದರಿಯಲ್ಲಿ ಮಹಾದೇವರ ಈ ಪುಣ್ಯ ಪುರಾತನ ಆತ್ಮಲಿಂಗ ಇರುವ ಜಗತ್ತಿನ ಏಕೈಕ ಕ್ಷೇತ್ರಕ್ಕೆ ವಿಶೇಷ ಗಮನ ನೀಡಬೇಕಿದೆ.
ಇನ್ನೂ ಈ ವಿಷಯದಲ್ಲಿ ಮತ್ತೆ ನಾನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಪ್ರಸಂಗ ಬರದೇ ಇರಲಿ ಅಂತ ಶ್ರೀ ಮಹಾಬಲೇಶ್ವರ ಮಹಾದೇವರಲ್ಲಿ ಪ್ರಾರ್ಥನೆ.

300x250 AD

ಕೃಪೆ: ಡಾ. ರವಿಕಿರಣ ಪಟವರ್ಧನ ಶಿರಸಿ

Share This
300x250 AD
300x250 AD
300x250 AD
Back to top