ಭಟ್ಕಳ: ನರೇಂದ್ರ ಮೋದಿ ಅವರ ಕುರಿತು ಟೀಕೆ ಮಾಡುವವರಿಗೆ ಸ್ಪಷ್ಟ ಉತ್ತರ ಕೊಡಬೇಕಿದೆ. ಅಂತಹ ಪ್ರವೃತ್ತಿಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್ ಫೋಟೋ ಅನಾವರಣ ಗಂಡುಮೆಟ್ಟಿನ ನೆಲದ ತಾಕತ್ತು. ಸ್ವಾಭಿಮಾನಿ ಭಾರತದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ. ಅದಕ್ಕಾಗಿ ಬೂತ್ ಗೆಲುವು, ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳನ್ನು ಚುರುಕುಗೊಳಿಸಬೇಕಿದೆ. ಜಿಲ್ಲಾ ಮತ್ತು ರಾಜ್ಯ ಸಮಿತಿಗಳ ಜತೆಗೂಡಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಕಿಸಾನ್ ಸಮ್ಮಾನ್ ಯೋಜನೆ ಬಡವರ ಮನೆಗೆ ಅರ್ಜಿ ಕೊಡದೆ ಬರುತ್ತಿದೆ. ರೈತರ ಜಾಗೃತಿ ಮಾಡಬೇಕು. ಆಯುಷ್ಮಾನ್ ಸೇರಿ ಎಲ್ಲ ಯೋಜನೆಗಳ ಕುರಿತು ನೆನಪಿಸಬೇಕಿದೆ. ಮೀಸಲಾತಿ ಪ್ರಮಾಣ ಹೆಚ್ಚಳ, ಉಚಿತ ವಿದ್ಯುತ್, ವಿದ್ಯಾನಿಧಿ ಸೇರಿ ವಿವಿಧ ಯೋಜನೆಗಳ ಕುರಿತ ಮಾಹಿತಿ ಕೊಡಬೇಕಿದೆ ಎಂದು ಅವರು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಬಿಜೆಪಿ ಬಗ್ಗೆ ಅನುಮಾನ ಪಡುತ್ತಿದ್ದ ದಲಿತ ಮುಖಂಡರು, ದಲಿತ ಜನಾಂಗ, ಪರಿಶಿಷ್ಟ ಜಾತಿ, ಪಂಗಡಗಳೀಗ ಬಿಜೆಪಿಯತ್ತ ಆಕರ್ಷಿತವಾಗುತ್ತಿವೆ. ಇದನ್ನು ಮತವಾಗಿ ಪರಿವರ್ತಿಸುವ ಹೊಣೆಯನ್ನು ನಾವು ಹೊರಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಶಾಸಕರಾದ ಸುನೀಲ್ ನಾಯ್ಕ, ದಿನಕರ್ ಶೆಟ್ಟಿ, ರೂಪಾಲಿ ನಾಯ್ಕ ಮತ್ತು ರಾಜ್ಯ ಪದಾಧಿಕಾರಿಗಳು ಇದ್ದರು.