ಅಂಕೋಲಾ: ಈಡಿಗ ನಿಗಮ ಮಂಡಳಿ ರಚನೆ, ಸೇಂದಿ ತೆಗೆಯಲು ಅನುಮತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಆಗ್ರಹಿಸಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಐತಿಹಾಸಿಕ ಪಾದಯಾತ್ರೆಯ ಜಿಲ್ಲಾ ಅಧ್ಯಕ್ಷ ಉಲ್ಲಾಸ ನಾಯ್ಕ ಮೊರಳ್ಳಿ ಹೇಳಿದರು.
ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದ ಹೊರಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ವೀರಭದ್ರ ನಾಯ್ಕ ಸಿದ್ದಾಪುರ ಮಾತನಾಡಿ, ಸಾಗರ ಮಾರ್ಗವಾಗಿ ಬಂದ ಪಾದಯಾತ್ರೆಯು ಸಿದ್ದಾಪುರಕ್ಕೆ ಆಗಮಿಸಲಿದೆ. ಇಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಸಮಾಜದವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾರಿ ಮಾತನಾಡಿ, ಈ ಹಿಂದೆ ಕುಮಟಾದಲ್ಲಿ ಗುರುವಂದನೆ ಕಾರ್ಯಕ್ರಮ ಮಾಡಿದ ಸಂದರ್ಭದಲ್ಲಿ ಅಂಕೋಲಾದ ಕೊಡುಗೆ ಪ್ರಮುಖವಾಗಿತ್ತು. ಹೀಗೆ ಸಿದ್ದಾಪುರದಲ್ಲಿಯೂ ನಡೆಯುವ ಗುರುಗಳ ಕಾರ್ಯಕ್ರಮಕ್ಕೆ ಅಂಕೋಲಾದಿಂದ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಪಾದಯಾತ್ರೆ ಸಮಿತಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಮಂಜುಳಾ ನಾಯ್ಕ, ಜಿಲ್ಲಾ ಸಹಕಾರ್ಯದರ್ಶಿ ನಾಯ್ಕ ಸಿದ್ದಾಪುರ, ಉಪಾಧ್ಯಕ್ಷೆ ಲಕ್ಷ್ಮಣ ನಾಯ್ಕ, ವಿನಾಯಕ ನಾಯ್ಕ ಸಿದ್ದಾಪುರ, ಕೈಗಾ ರಾಜು ಅಂಕೋಲಾ, ಪಾದಯಾತ್ರೆ ಸಮಿತಿಯ ತಾಲೂಕು ಅಧ್ಯಕ್ಷ ನಾಗರಾಜ ಮಂಜಗುಣಿ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಮೋಹನ ಎಚ್. ನಾಯ್ಕ, ಪದಾಧಿಕಾರಿಗಳಾದ ಶ್ರೀಧರ ನಾಯ್ಕ, ಬಾಲಕೃಷ್ಣ ನಾಯ್ಕ, ಉದಯ ಆರ್. ನಾಯ್ಕ, ನಾಗರಾಜ ನಾಯ್ಕ ಶಿರೂರು, ವಾಸುದೇವ ನಾಯ್ಕ, ಜಟ್ಟಿ ನಾಯ್ಕ, ವಿಜಯ ನಾಯ್ಕ, ನಾರಾಯಣಗುರು ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೃಷ್ಣ ನಾಯ್ಕ, ರಾಘವೇಂದ್ರ ನಾಯ್ಕ ಕೊಂಡಳ್ಳಿ, ಗಣಪತಿ ನಾಯ್ಕ ಇತರರಿದ್ದರು.