ಭಟ್ಕಳ: ಇಲ್ಲಿನ ಸಿದ್ಧಾರ್ಥ ಪದವಿಪೂರ್ವ ಕಾಲೇಜು ಮತ್ತು ಸಿದ್ಧಾರ್ಥ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಭಟ್ಕಳ ಇತಿಹಾಸದಲ್ಲೇ ಪ್ರಪ್ರಥಮವಾಗಿ ಐ.ಎ.ಎಸ್ ಮತ್ತು ಕೆ.ಎ.ಎಸ್., ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ನಿವೃತ್ತ ಶಿಕ್ಷಕ ಎಮ್.ಬಿ.ನಾಯ್ಕ ಉದ್ಘಾಟಿಸಿದರು. ಎನ್.ಐ.ಟಿ.ಕೆ ಸುರತ್ಕಲ್ನ ಹಿರಿಯ ಪ್ರಾಧ್ಯಾಪಕ ಡಾ.ಜೋರಾ ಗೊಂಡ ಅವರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ನಂತರ ಇರುವ ವಿವಿಧ ಕ್ಷೇತ್ರಗಳ ಆಯ್ಕೆಗಳ ಬಗ್ಗೆ ಸಮಗ್ರವಾಗಿ ಮಾರ್ಗದರ್ಶನ ನೀಡಿದರು. ರಾಜ್ಯ ಪ್ರಶಸ್ತಿ ವಿಜೇತ ಹನುಮಂತ ಬೆಣ್ಣೆ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸತೀಶ ಬಿ.ನಾಯ್ಕ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಸದುಪಯೋಗ ಮತ್ತು ಮನಸ್ಸಿನ ಏಕಾಗ್ರತೆಯ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು.
ಶ್ರೀರಾಮ ಸ್ಟಡಿ ಸರ್ಕಲ್ ನಿರ್ದೇಶಕ ಸೂರಜ್ ನಾಯ್ಕ, ಐ.ಎ.ಎಸ್., ಕೆ.ಎ.ಎಸ್. ಪಿ.ಎಸ್.ಐ ಮತ್ತು ಬ್ಯಾಕಿಂಗ್ ಪರೀಕ್ಷೆಗಳ ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ವಿಷಯದ ಬಗ್ಗೇ ಸಮಗ್ರ ಮಾಹಿತಿಯನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ಒದಗಿಸಿದರು. ಬಿ.ಎ., ಬಿ.ಎಸ್ಸಿ, ಬಿ.ಕಾಂ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ ಈ ತರಬೇತಿ ಪ್ರಾರಂಭಿಸಿದಕ್ಕೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅರ್ಚನಾ ಯು. ಮಾತನಾಡಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದ ಮಗು ಇಲ್ಲಿ ಡಿಗ್ರಿವರೆಗೆ ಮುಂದುವರಿಸಿದೆ. ಒಂದು ಸರಕಾರಿ ಉದ್ಯೋಗ ಪಡೆಯುವವರೆಗೆ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು. 2000 ಚ.ಮೀ. ವಿಸ್ತೀರ್ಣದ ಗ್ರಂಥಾಲಯ ಮತ್ತು ವಾಚನಾಲಯವನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ಸಮರ್ಪಿಸಲಾಯಿತು.
ಎಮ್.ಆರ್.ನಾಯ್ಕ, ಸಿ.ಎ.ಜ್ಞಾನೇಶ ಮಾನಕಾಮೆ, ಅಶೋಕ್ಕುಮಾರ ಶೆಟ್ಟಿ, ಎಂ.ಕೆ.ನಾಯಕ್ ಮಾತನಾಡಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ 750ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.