ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಹಾಗೂ ಕುಮಟಾ ಪುರಸಭೆಗೆ ತಲಾ 5 ಕೋಟಿ ರೂ.ಗಳಂತೆ ಎಸ್.ಎಫ್.ಸಿ. ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ತಂದಿರುವುದಾಗಿ ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರ ಪಟ್ಟಣ ಪಂಚಾಯಿತಿಯಾಗಿದ್ದರೂ, ಕುಮಟಾ ಪುರಸಭೆಯಾಗಿದ್ದರೂ ಅನುದಾನ ತರುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ತಿಳಿಸಿದರು. ಹೊನ್ನಾವರ ಪ.ಪಂ.ಗೆ ಕಳೆದ ಸಲ ತಂದಿರುವ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಕೇವಲ 1.5 ಕೋಟಿ ಮಾತ್ರ ಸಿಕ್ಕಿತ್ತು. ಉಳಿದ ಅನುದಾನ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ, ಅವರಿಗೆ ಸಂಬAಧಪಟ್ಟ ಅನುದಾನಕ್ಕೆ, ಕುಡಿಯುವ ನೀರಿಗೆ ವೆಚ್ಚಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳಾಗಿವೆ. ಪ.ಪಂ.ಭಾಗದಲ್ಲಿ ಆಗಬೇಕು ಎಂದು ಪ.ಪಂ.ಸದಸ್ಯರು ಹೇಳುತ್ತಿದ್ದರು. ಈ ಬಾರಿ ತಂದಿರುವ 5 ಕೋಟಿ ಅನುದಾನವನ್ನು ಪ.ಪಂ. ಸದಸ್ಯರು ತಮ್ಮ ವಾರ್ಡುಗಳಿಗೆ ಸೂಚಿಸಿದ ಹಂಚಿಕೆ ಮಾಡುವರು ಎಂದು ತಿಳಿಸಿದರು.
ತುಳಿಸಿನಗರದಲ್ಲಿ 50 ಲಕ್ಷ ರೂ. ಮೀನುಗಾರರಿಗೆ ರ‍್ಯಾಂಪ್ ಕಾಮಗಾರಿ, ಪ್ರವಾಸಿಮಂದಿರದ ಬಳಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪ.ಪಂ. ವ್ಯಾಪ್ತಿಯಲ್ಲಿ ಕೈಗೊಂಡಿದ್ದೇನೆ. ಶಾಲಾ ಕಟ್ಟಡಕ್ಕೆ ಅನುದಾನ ನೀಡಿದ್ದೇನೆ. ಹೊನ್ನಾವರ ಪ.ಪಂ. ಕುಡಿಯುವ ನೀರಿಗೆ ಕುಮಟಾ ಪುರಸಭೆಗೆ 85 ಲಕ್ಷ ತುಂಬಬೇಕಾಗಿತ್ತು. ಹೊನ್ನಾವರ ಪ.ಪಂ.ಬಳಿ ಅಷ್ಟು ಹಣವಿರಲಿಲ್ಲ. ಹಾಗಾಗಿ 50 ಲಕ್ಷ ರೂ.ಗಳನ್ನು ಹೊನ್ನಾವರ ಪ.ಪಂ. ಪರವಾಗಿ ಸರಕಾರದಿಂದ ಮಂಜೂರು ಮಾಡಿಸಿ ಕುಮಟಾ ಪುರಸಭೆಗೆ ನೀಡಲಾಗಿದೆ. ಇನ್ನೂ 35 ಲಕ್ಷ ರೂ.ಗಳನ್ನು ತುಂಬಬೇಕಾಗಿದೆ ಎಂದು ತಿಳಿಸಿದರು.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕುಮಟಾ ತಾಲೂಕಿನ ಮಿರ್ಜಾನದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಈ ನಿಟ್ಟಿನಲ್ಲಿ ಬಹಳ ಮುತುವರ್ಜಿ ವಹಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆಗೆ ಬರಲಿದ್ದಾರೆ ಎಂದು ತಿಳಿಸಿದರು.
ಶರಾವತಿ ಕುಡಿಯುವ ನೀರಿನ ಯೋಜನೆ ಶೇ 75ರಷ್ಟು ಕಾಮಗಾರಿ ಆಗಿದೆ. ಫೆಬ್ರವರಿ ತಿಂಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಕೊಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಹೊನ್ನಾವರ ಸರಕಾರಿ ಆಸ್ಪತ್ರೆಗೆ ಎರಡು ಡಯಾಲಿಸಿಸಿ ಹೊಸ ಯಂತ್ರ ಬಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜು ಭಂಡಾರಿ, ಮುಖಂಡರಾದ ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಲೋಕೇಶ ಮೇಸ್ತ, ಉಲ್ಲಾಸ ನಾಯ್ಕ, ನಾರಾಯಣ ಹೆಗಡೆ, ಪ.ಪಂ. ಅಧ್ಯಕ್ಷೆ ಭಾಗ್ಯಾ ಮೇಸ್ತ, ನಿಶಾ ಶೇಟ್, ಸದಸ್ಯರಾದ ಶಿವರಾಜ ಮೇಸ್ತ, ನಾಗರಾಜ ಭಟ್, ಮಹೇಶ ಮೇಸ್ತ, ದತ್ತಾತ್ರೆಯ ಮೇಸ್ತ ಮತ್ತಿತರರು ಇದ್ದರು.