ಭಟ್ಕಳ: ಜಿಲ್ಲಾ ಯುವಜನ ಸಬಲೀಕರಣ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಡಿ.30 ಮತ್ತು 31ರಂದು ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.30 ಮತ್ತು 31ರಂದು ನಡೆಯಲಿರುವ ಕ್ರೀಡಾಕೂಟ ಶ್ರೀಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಸಲಿದ್ದಾರೆ ಎಂದ ಅವರು ಈ ಕ್ರೀಡಾಕೂಟದಲ್ಲಿ ಒಟ್ಟು 35 ಕ್ರೀಡಾ ಸ್ಪರ್ಧೆಗಳು ನಡೆಯಲಿದೆ ಎಂದರು.
ಜಿಲ್ಲೆಯ 12 ತಾಲೂಕಿನಿಂದ ಸುಮಾರು 2ರಿಂದ 3 ಸಾವಿರ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಪರುಷ ಸರ್ಕಾರಿ ನೌಕರರಿಗೆ 40ಕ್ಕಿಂತ ಕಡಿಮೆ, 40ರಿಂದ 50, 50 ರಿಂದ 60 ವರ್ಷದ ಹಾಗೂ ಮಹಿಳಾ ಸರಕಾರಿ ನೌಕರರಿಗೆ 30ಕ್ಕಿಂತ ಕಡಿಮೆ, 35 ರಿಂದ 45, 50 ರಿಂದ 60 ವರ್ಷ ವಯೋಮಿತಿಗೆ ಒಳ ಪಟ್ಟು 3 ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕುಸ್ತಿ ಸ್ಪರ್ಧೆ ಹಳಿಯಾಳ ಹಾಗೂ ಈಜು ಸ್ಪರ್ಧೆಯನ್ನು ಸಿರ್ಸಿಯಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿದ್ದು, ವೈಯಕ್ತಿಕ ವಿಭಾಗದಲ್ಲಿ 5ಕ್ಕಿಂತ ಕಡಿಮೆ ಸ್ಪರ್ಧಾಳುಗಳು ಗುಂಪು ಸ್ಪರ್ಧೆಯಲ್ಲಿ 3ಕ್ಕಿಂತ ಕಡಿಮೆ ತಂಡಗಳು ಭಾಗವಹಿಸಿದ್ದಲ್ಲಿ ಅಂತಹ ಸ್ಪರ್ಧೆಯನ್ನು ರದ್ದುಗೊಳಿಸಲಾಗಿತ್ತದೆ ಎಂದ ಅವರು ಓರ್ವ ಕ್ರೀಡಾಪಟು ಗರಿಷ್ಠ 3 ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ನಿಗಮ ಮಂಡಳಿ, ಗುತ್ತಿಗೆ ಆಧಾರಿತ ಸರ್ಕಾರಿ ನೌಕರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಜಿಲ್ಲೆಯ 12 ತಾಲೂಕುಗಳ ಸರ್ಕಾರಿ ನೌಕರರು ಡಿ.22 ರ ಸಂಜೆ 5 ಗಂಟೆಯೊಳಗಾಗಿ ಗೂಗಲ್ ಫಾಮ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನಂತರ ಬಂದವರ ಹೆಸರನ್ನು ಪರಿಗಣಿಸುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತಮವಾಗಿ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷೆ ಡಾ.ಭಾಗೀರಥಿ ನಾಯ್ಕ, ಭಟ್ಕಳ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಯುವ ಜನಸೇವಾ ಕ್ರೀಡಾ ಇಲಾಖೆಯ ಪ್ರಭಾರಿ ನಾಗರಾಜ ಪಟಗಾರ, ಮಂಜುನಾಥ ನಾಯ್ಕ, ಸುಶೀಲ ಮೊಗೇರ ಹಾಗೂ ಮುಂತಾದವರು ಇದ್ದರು.