ಕುಮಟಾ: ರಾಷ್ಟ್ರೀಯ ಪಿಂಚಣಿ ರದ್ದು ಪಡಿಸಿ ಹಿಂದಿನ ನಿಶ್ಚಿತ ಪಿಂಚಣಿ ಸೌಲಭ್ಯವನ್ನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕವು ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಮಾಡಿತು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿ, ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ನಿಶ್ಚಿತ ಪಿಂಚಣಿ ಸೌಲಭ್ಯ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು. ಸರ್ಕಾರ ಜಾರಿಗೊಳಿಸಿರುವ ಹೊಸ ಪಿಂಚಣಿಯಿoದ ನಿವೃತ್ತಿಯ ನಂತರ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ 19 ಡಿಸೆಂಬರ್ 2022ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದ ಬಗ್ಗೆ ಪ್ರತಿಭಟನೆ ಬಗ್ಗೆ ಶಾಸಕರ ಗಮನ ಸೆಳೆದ ನೌಕರರು, ಇಡೀ ದೇಶದಲ್ಲಿ ಈಗಾಗಲೇ ಐದು ರಾಜ್ಯಗಳು ಎನ್ ಪಿ ಎಸ್ ಬಗ್ಗೆ ಕ್ರಮ ವಹಿಸಿದೆ ಹಾಗೂ ಈಗಾಗಲೇ ಹರಿಯಾಣದಲ್ಲಿಯೂ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಎನ್ ಪಿ ಎಸ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಅದನ್ನು ಜಾರಿಗೆ ತರುವ ಬಗ್ಗೆ ಅಲ್ಲದೆ ಎನ್ ಪಿ ಎಸ್ ನಿಂದ ಕಡಿತವಾಗುವ ಮೊತ್ತ 10% ಮತ್ತು ಸರ್ಕಾರದಿಂದ 14% ಒಟ್ಟು 24% ಮೊತ್ತ ಬಳಕೆಯ ಬಗ್ಗೆ ಹಾಗೂ ನಂತರ ಅದನ್ನು 33% ನಂತೆ ಮೂರು ಭಾಗ ಮಾಡಿ ಷೇರು ಮಾರುಕಟ್ಟೆ ವಿಮೆ ಹಾಗೂ ಇತರೆ ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಮತ್ತು ಅದರಿಂದ ಬರುವ ಮೊತ್ತವನ್ನು ನೌಕರರಿಗೆ ನೀಡುವ ಬಗ್ಗೆ ಅಲ್ಲದೆ ಬೇರೆ ದೇಶಗಳಲ್ಲಿ ಎನ್ ಪಿ ಎಸ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ನಷ್ಟದ ಬಗ್ಗೆಯೂ ಈ ಮನವಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಮನವಿಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೆನೆ. ಎನ್‌ಪಿಎಸ್ ರದ್ದುಗೊಳಿಸುವ ಬಗ್ಗೆ ಮತ್ತು ಹಳೇ ಪಿಂಚಣಿಯನ್ನು ಜಾರಿಗೊಳಿಸುವ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಮುಖ್ಯಮಂತ್ರಿಗಳೊoದಿಗೆ ಈ ಬಗ್ಗೆ ಮಾತನಾಡುವ ಭರವಸೆಯನ್ನು ನೀಡಿದರು
ಮನವಿ ಸಲ್ಲಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್. ಪಿ. ಎಸ್. ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟ್ರಮಣ ಪಟಗಾರ, ಸದಸ್ಯರಾದ ಆನಂದು ನಾಯ್ಕ್, ವಿನೋದರಾವ್, ಅಣ್ಣಯ್ಯ ಲಮಾಣಿ, ಚಂದ್ರಶೇಖರ ನಾಯ್ಕ, ತಾರಾ ನಾಯ್ಕ ಮತ್ತು ಕಂದಾಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ 40ಕ್ಕೂ ಹೆಚ್ಚು ನೌಕರರು ಇದ್ದರು.