ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರರೇ ಮೀನುಗಾರಿಕೆ ಬಂದರು ಪ್ರದೇಶಗಳಲ್ಲಿ ಹೂಳು ತೆಗೆಯುತ್ತಿರುವುದನ್ನು ಗಮನಿಸಿ ಅವರ ಸಂಘಕ್ಕೆ ಸರ್ಕಾರದಿಂದ ಹೂಳು ತೆಗೆಯುವ ಜವಾಬ್ದಾರಿ ನೀಡುವ ಕುರಿತು ಯೋಚನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಬಂದರುಗಳಲ್ಲಿ ಹೂಳು ತೆಗೆಯಲು ಟೆಂಡರ್‌ದಾರರ ಕೆಲವು ಸಮಸ್ಯೆಗಳಿವೆ. ಕೆಲವರು ನ್ಯಾಯಾಲಯಕ್ಕೆ ತೆರಳಿ ಬೇರೆ ಕೆಲಸವಾಗದಂತೆ ತಡೆಯಾಜ್ಞೆ ತರುತ್ತಿದ್ದರು. ಈಗ ಸರಕಾರದಿಂದ ಬಂದರಿನ ಹೂಳು ತೆಗೆಯಲು 20 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಕಾರವಾರದಲ್ಲಿ ಒಬ್ಬರು ಮಾತ್ರ ಟೆಂಡರ್ ಪಡೆಯಲು ಮುಂದಾಗಿದ್ದು ಭಟ್ಕಳದಲ್ಲಿ ಯಾವುದೇ ಅರ್ಜಿ ಬಂದಿಲ್ಲ. ಹೀಗಾಗಿ ಸರಕಾರದಿಂದ ಅನುದಾನ ಹಾಗೂ ನಿರ್ಮಿತಿ ಕೇಂದ್ರದಲ್ಲಿ ಸಹಕಾರ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಬಿಡುಗಡೆಯಾದ 20 ಕೋಟಿಯಲ್ಲಿ 11 ಕೋಟಿ ರೂ ಹಣ ಜಿಲ್ಲೆಗೆ ಬಂದಿರುವುದರಿಂದ ಮೀನುಗಾರರಿಗೆ ಅನ್ಯಾಯವಾಗುವುದಿಲ್ಲ. ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಸರಕಾರದ ಮುಂದೆ ಬೇಡಿಕೆ ಇಡುತ್ತೇವೆ ಎಂದು ಹೇಳಿದರು.
ಸಿಆರ್‌ಝೆಡ್ ವಲಯದಲ್ಲಿ ಮರಳು ತೆಗೆಯದಂತೆ ಹಸಿರು ಪೀಠವು ಕೊಟ್ಟಿರುವ ಆದೇಶದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಿಆರ್‌ಝೆಡ್ ವ್ಯಾಪ್ತಿ ಹೊರತುಪಡಿಸಿ ಇರುವಂತಹ ನದಿಯ ಹರಿವಿನಲ್ಲಿ ಮರಳು ತೆಗೆಯಲು ಅನುಮತಿ ಕೋರಿ ಕೆಲವರು ಮನವಿ ನೀಡಿದ್ದರು. ಹೀಗಾಗಿ ಸಿ ಆರ್ ಝೆಡ್ ವಲಯವನ್ನು ಪುನಃ ಸರ್ವೇ ಮಾಡಲಾಗುತ್ತದೆ. ಮಂಗಳವಾರ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದರು. ಪಶು ಸಂಗೋಪನೆ ಇಲಾಖೆಯಿಂದ ಹಳಿಯಾಳ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಗೋಶಾಲೆಯನ್ನು ಪ್ರಾರಂಭಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಹಂತದಲ್ಲಿ 50 ದ್ವಿಚಕ್ರ ವಾಹನಗಳನ್ನು ನಿರುದ್ಯೋಗಿಗಳಿಗೆ ನೀಡಲಾಗುವುದು. ರೂ.50000 ಸಬ್ಸಿಡಿ ಹಾಗೂ ರೂ.20000 ಬ್ಯಾಂಕ್ ಸಾಲಗಳ ಮೂಲಕ ಪೂರೈಸಲಾಗುವುದು. ಇದರಿಂದ ಸಣ್ಣ ಪುಟ್ಟ ವ್ಯಾಪಾರ ಮಾಡಲು ಮತ್ತು ಅವರನ್ನು ಸ್ವಾವಲಂಬಿಯಾಗಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ ಎಂಬ ಮರಾಠಿ ಸಾಹಿತ್ಯ ಸಮ್ಮೇಳನದ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನುಷ್ಠಾನ ಆಗಲು ಸಾಧ್ಯವಿರದ್ದನ್ನ ಮಹಾರಾಷ್ಟ್ರದವರು ಹೇಳುತ್ತಿರುತ್ತಾರೆ. ಅವರ ಹೇಳಿಕೆಯ ಬಗ್ಗೆ ಗಂಭೀರವಾಗಿ ಪರಿಗಣಿಸುವಂಥ ಅಗತ್ಯವಿಲ್ಲ ಎಂದರು. ಕರಾವಳಿ ಉತ್ಸವ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಒಂದೇ ದಿನ ನಿಗದಿಯಾಗಿದ್ದರಿಂದ ಕೊಂಚ ಗೊಂದಲವಾಗಿದೆ. ಹೀಗಾಗಿ ಉತ್ಸವದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕೃತವಾಗಿ ಏನೆಂದು ತಿಳಿಸಲಾಗುವುದು ಎಂದರು.
ಬಂದರು ಹೂಳೆತ್ತುವ ಜವಾಬ್ದಾರಿಯನ್ನು ಮೀನುಗಾರರ ಸಂಘಕ್ಕೇ ನೀಡಲು ಚಿಂತನೆ: ಸಚಿವ ಪೂಜಾರಿ
