Slide
Slide
Slide
previous arrow
next arrow

‘ಪ್ರಾಯಶಃ’ ಸಿನಿಮಾಗೆ ಯಲ್ಲಾಪುರದ ಪ್ರಶಾಂತ್ ಪಾಟೀಲ್ ಛಾಯಾಗ್ರಹಣ

300x250 AD

ಯಲ್ಲಾಪುರ: ತಾಲೂಕಿನಲ್ಲಿ ಅತ್ಯಂತ ಅದ್ಭುತವಾದ ಯುವ ಪ್ರತಿಭೆಗಳಿವೆ. ಅವಕಾಶ ಸಿಕ್ಕರೆ ಎಂತವರನ್ನು ಮೀರಿಸುವ ಶಕ್ತಿ ಹಾಗೂ ತಂತ್ರಜ್ಞಾನ ಅವರಲ್ಲಿದೆ, ಇದಕ್ಕೆ ತಾಜಾ ಉದಾಹರಣೆ ಯಲ್ಲಾಪುರ ಪಟ್ಟಣ ವ್ಯಾಪ್ತಿಯ ರಾಮಪುರದ ಪ್ರಶಾಂತ ಪಾಟೀಲ, ಮೊದಲ ಪ್ರದರ್ಶನದಲ್ಲಿಯೇ ಪ್ರೇಕ್ಷಕರ ಮನೆಗೆದ್ದಿರುವ ‘ಪ್ರಾಯಶಃ’ ಸಿನೆಮಾದ ಛಾಯಾಗ್ರಾಹಕರಾಗಿ ರಾಜ್ಯಾದ್ಯಂತ ಗಮನಸೆಳೆದಿದ್ದಾರೆ.
ಅರಣ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಣ್ಣಪ್ಪ ಪಾಟೀಲ್ ಅವರ ಎರಡನೇ ಪುತ್ರ ಪ್ರಶಾಂತ್ ಪಾಟೀಲ್, ಪ್ರಾಯಶಃ ಚಲನಚಿತ್ರ ಬಿಡುಗಡೆಯಾದ ನಂತರ ಬಹಳಷ್ಟು ಚರ್ಚೆಗೆ, ಶ್ಲಾಘನೆಗೆ ಬಂದವರು. ಅಣ್ಣ ಪ್ರಕಾಶ್ ಪಾಟೀಲ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಬೆಂಗಳೂರಿಗೆ ಕಾಲಿಟ್ಟ ನಂತರ, ತಮ್ಮ ಪ್ರಶಾಂತನನ್ನು ಕರೆದು, ಈಗಾಗಲೇ ಧಾರವಾಹಿಗಳ ಛಾಯಾಗ್ರಹಣದಲ್ಲಿ ಹೆಸರು ಮಾಡಿದ್ದ ಬೆಂಗಳೂರಿನಲ್ಲಿದ್ದ ಶಿರಸಿಯ ಗಣೇಶ ಹೆಗಡೆ ಅವರ ಸಹಾಯಕರಾಗಿ 2009ರಲ್ಲಿ ಕೆಲಸಕ್ಕೆ ಸೇರಿಸಿದರು, ನಂತರ ಪ್ರಶಾಂತ ತಿರುಗಿ ನೋಡಿರುವುದೇ ಇಲ್ಲ ಒಂದುವರೆ ವರ್ಷ ಭಾರತೇಶ ನಿರ್ದೇಶನ, ಗಣೇಶ ಹೆಗಡೆ ಮುಖ್ಯ ಛಾಯಾಗ್ರಹಣ ಇರುವ ‘ಹೆಳವನ ಕಟ್ಟೆ ಗಿರಿಯಮ್ಮ’ ಧಾರವಾಹಿಯ ಸಹಾಯಕ ಕ್ಯಾಮೆರಾಮನ್ನಾಗಿ ಕೆಲಸ ಮಾಡಿದರು, ನಂತರ ಅದೇ ಧಾರಾವಾಹಿಗೆ ಮುಖ್ಯ ಕ್ಯಾಮೆರಾ ಮನ್ ಆಗಿ ಕೆಲಸ ಮಾಡಿದರು.
ಇವರ ಚಾಕಚಕ್ಯತೆಯನ್ನು ಗಮನಿಸಿದ ಹಲವಾರು ನಿರ್ದೇಶಕರು ಜೀ ಕನ್ನಡದಲ್ಲಿ ಪ್ರಸಾರವಾದ ‘ರಾಧಾಕಲ್ಯಾಣ’ ಧಾರವಾಹಿ ಮುಖ್ಯ ಕ್ಯಾಮೆರಾಮನ್ ಆಗಿ, ಜೀ ಕನ್ನಡದಲ್ಲಿಯೇ ಪ್ರಸಾರವಾದ ಕವಿತಾ ಲಂಕೇಶ ನಿರ್ಮಾಣದ ‘ನನ್ನ ಪ್ರೀತಿಯ ಶ್ರೀಮತಿ’ ಧಾರವಾಹಿಯ ಮುಖ್ಯ ಕ್ಯಾಮೆರಾ ಮೆನ್ ಆಗಿ, ದಿ. ಪುನೀತ್ ರಾಜಕುಮಾರ್ ಅಭಿನಯಿಸಿ ಬಹಳಷ್ಟು ಜನಪ್ರಿಯತೆಯನ್ನು ಪಡೆದ ‘ಮಿಲನ’ ಸಿನಿಮಾದ ನಿರ್ದೇಶಕರಾದ ಮಿಲನ ಪ್ರಕಾಶ ನಿರ್ಮಾಣ ಹಾಗೂ ನಿರ್ದೇಶನದ ‘ಕುಲವಧು’ ಧಾರವಾಹಿಯ ಮುಖ್ಯ ಕ್ಯಾಮೆರಾಮನ್ ಆಗಿ, ‘ಮೊಗ್ಗಿನ ಮನಸ್ಸು’, ‘ಸಪ್ತ ಮಾತೃಕ’ ಧಾರಾವಾಹಿಗಳನ್ನು ಮುಖ್ಯ ಕ್ಯಾಮೆರಾ ಮನ್ ಆಗಿ ಇತ್ತೀಚೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ನಟ ನಿರ್ದೇಶಕ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಜನಪ್ರಿಯ ಧಾರವಾಹಿ ‘ಸುಂದರಿ’ಯಲ್ಲಿ ಪ್ರಶಾಂತ್ ಅಣ್ಣಪ್ಪ ಪಾಟೀಲ್ ಮುಖ್ಯ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದಾರೆ.
ಹೊಸಬರೇ ನಿರ್ಮಾಣ ಮಾಡಿರುವ ಎಲ್ಲ ಹೊಸ ಮುಖಗಳಿಗೆ ಅವಕಾಶ ನೀಡಿ ಡಿಸೆಂಬರ್ 9 ರಿಂದ ಪ್ರದರ್ಶನಗೊಂಡು ಪ್ರೇಕ್ಷಕರ ಮನೆಗೆದ್ದಿರುವ ‘ಪ್ರಾಯಶಃ’ ಸಿನಿಮಾದ ಮೇನ್ ಕ್ಯಾಮೆರಾಮನ್ ಆಗಿ ಪ್ರಶಾಂತ ಪಾಟೀಲ ಕೆಲಸ ಮಾಡಿದ್ದಾರೆ. ಒಂದು ಕೊಲೆಯ ಸುತ್ತ ಹುಟ್ಟಿಕೊಳ್ಳುವ ಥ್ರಿಲ್ಲರ್ ಮತ್ತು ಕುತೂಹಲ ಭರಿತ ಸಿನೆಮಾದಲ್ಲಿ ಕ್ಯಾಮೆರಾಮನ್ ಕೈಚಳಕಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.   ಒಟ್ಟಾರೆ ‘ಪ್ರಾಯಶಃ’ ವಲನಚಿತ್ರ ಜನಮೆಚ್ಚಿದ ಸಿನಿಮಾ ಆಗಿದೆ.
ಚಿತ್ರ ವೀಕ್ಷಿಸಿದ ಜನರ ಅಭಿಪ್ರಾಯ
ಡಿ.9 ರಂದು ಬಿಡುಗಡೆಯಾದ ಪ್ರಾಯಶ: ಎನ್ನುವ ಚಿತ್ರ ಕೂಡ ಭಾರಿ ನಿರೀಕ್ಷೆ ಹುಟ್ಟಿಸಿದೆ. ಸಾಕಷ್ಟು ಸೀರಿಯಲ್ ನಿರ್ದೇಶಿಸಿದ್ದ ರಂಜಿತ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ವೀಕ್ಷಿಸಿ ಹೊರಬಂದ ಎಲ್ಲ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು. ಚಿತ್ರ ವೀಕ್ಷಿಸಿದ ಎಲ್ಲ ಪ್ರೇಕ್ಷಕರ ಪ್ರತಿಕ್ರಿಯೆ ಒಂದೇ ಆಗಿತ್ತು, ಚಿತ್ರ ನೋಡುವಾಗ ಎಲ್ಲೂ ಇದು ಹೊಸಬರ ಚಿತ್ರ ಅಂತ ಅನಿಸುವುದೇ ಇಲ್ಲ. ತುಂಬಾ ಚೆನ್ನಾಗಿ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ. ಚಿತ್ರದ ಪ್ರತಿ ಸೀನ್ ಕುತೂಹಲ ಕೆರಳಿಸುತ್ತಲೇ ಹೋಗುತ್ತದೆ. ಬಹಳ ದಿನಗಳ ನಂತರ ಒಳ್ಳೆಯ ಥ್ರಿಲ್ಲರ್ ಚಿತ್ರವನ್ನು ನೋಡಿದ ಅನುಭವವಾಗಿದೆ ಎನ್ನುವುದಾಗಿತ್ತು.
ಅರ್ಹ ಕ್ರಿಯೇಶನ್ಸ್ ಬ್ಯಾನರ್ ಅಡಿ ಸ್ನೇಹಿತರೆಲ್ಲ ನಿರ್ಮಿಸಿರುವ ಈ ಚಿತ್ರದಲ್ಲಿ ಕ್ರೈಮ್ ಥ್ರಿಲ್ಲರ್ ಜೊತೆಗೆ ಪ್ರೀತಿಯ ಎಳೆಯೂ ಇದೆ. ಕೊಲೆ ಪ್ರಕರಣವೊಂದರ ಸುತ್ತ ನಡೆಯುವ ಕಥೆಯಲ್ಲಿ ಪ್ರೇಕ್ಷಕರ ಊಹೆಗೂ ಮೀರಿದ್ದನ್ನು ಹೇಳಲಾಗಿದೆ. ನಿಮಿಷವೂ ಬೋರ್ ಆಗದ ಹಾಗೆ ಸಾಗುವ ಕಥೆಯಲ್ಲಿ ಹಲವಾರು ಲೇಯರ್‌ಗಳಿವೆ. ನಾಯಕ ರಾಹುಲ್ ಹಾಗೂ ನಾಯಕಿ ಕೃಷ್ಣಿ ಭಟ್ ಉತ್ತಮ ಅಭಿನಯ ನೀಡಿದ್ದಾರೆ. ಜೊತೆಗೆ ಪ್ರಶಾಂತ್ ಪಾಟೀಲ್ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿದೆ ಎನ್ನುವುದಾಗಿದೆ.

300x250 AD
Share This
300x250 AD
300x250 AD
300x250 AD
Back to top