ಹಳಿಯಾಳ: ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯ ತರಬೇತಿ ಶಿಬಿರವು ಕೆಎಲ್‌ಎಸ್ ವಿಡಿಐಟಿಯದಲ್ಲಿ ಜರುಗಿತು.
ತಾಲ್ಲೂಕಿನ ಆರೋಗ್ಯ ಅಧಿಕಾರಿ ಡಾ.ಅನಿಲ್‌ಕುಮಾರ್ ನಾಯಕ ಮಾತನಾಡಿ, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಂತರ್ಜಾಲದ ಮೂಲಕ ರೋಗಿಗಳ ದಾಖಲಾತಿ ಅರ್ಜಿಗಳನ್ನು ಭರ್ತಿ ಮಾಡುವುದು, ಸಾಂಕ್ರಾಮಿಕ ರೋಗಗಳ ಮಾಹಿತಿ ತುಂಬುವುದನ್ನು ಕಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಮಹಾವಿದ್ಯಾಲಯಕ್ಕೆ ತಾವು ಆಭಾರಿಯಾಗಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ಇಂತಹ ಕಾರ್ಯ ಚಟುವಟಿಕೆಗಳಿಗೆ ಮಹಾವಿದ್ಯಾಲಯವು ಸದಾ ಸಹಕಾರ ನೀಡುವುದೆಂದು ಹೇಳಿದರು. ಕಾರವಾರದ ಸೂಕ್ಷ್ಮ ಜೀವಶಾಸ್ತ್ರಜ್ಞರಾದ ರೇಣುಕಾ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಅಫಿಫಾ ತರಬೇತುದಾರರಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಜೊಯಿಡಾ ತಾಲ್ಲೂಕಿನ ಆರೋಗ್ಯ ಅಧಿಕಾರಿ ಸುಜಾತಾ ಒಕ್ಕಲಿ ಮತ್ತು ಮಹಾವಿದ್ಯಾಲಯದ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ.ಮಂಜುನಾಥ ಡಿ. ಉಪಸ್ಥಿತರಿದ್ದರು.
ತಾಲೂಕಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಚನ್ನಬಸವರಾಜ ಸ್ವಾಗತಿಸಿದರು. ತಾಲ್ಲೂಕಿನ ಕ್ಷಯರೋಗ ವಿಭಾಗದ ಮೇಲ್ವಿಚಾರಕ ರಾಹುಲ್ ವಂದಿಸಿ ನಿರೂಪಿಸಿದರು. ಶ್ರೀಚನ್ನಬಸವರಾಜ ಮತ್ತು ಮಹಾವಿದ್ಯಾಲಯದ ಗಣಕಯಂತ್ರ ಕೇಂದ್ರದ ಮುಖ್ಯಸ್ಥ ಪ್ರೊ.ಅಭಯ್ ಇಂಚಲ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಆರೋಗ್ಯ ಇಲಾಖೆಯ 45ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.