ಯಲ್ಲಾಪುರ: ಅಂಕೋಲಾ, ಕಾರವಾರ, ಕುಮಟಾ ಅಥವಾ ಬೇರೆ ಯಾವುದೇ ತಾಲೂಕಿನಿಂದ ಯಲ್ಲಾಪುರಕ್ಕೆ ಬಂದು ಅಧಿಕೃತ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಯಾರಿಗೂ ಕೂಡ ಅವಕಾಶವಿದೆ. ಆದರೆ ಬೇಕಾಬಿಟ್ಟಿಯಾಗಿ ಪಟ್ಟಣದಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಮೀನು ಮಾರಾಟದ ಹೆಸರಿನಲ್ಲಿ ಪಟ್ಟಣದಲ್ಲಿ ದುರ್ಗಂಧ ಗಲೀಜು ಮಾಡಲು ನಮ್ಮ ವಿರೋಧವಿದೆ ಎಂದು ಮತ್ಸ್ಯಗಂಧ ಮೀನು ಮಾರಾಟಗಾರರ ಕಾರ್ಮಿಕ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಕಳೆದ 40- 50 ವರ್ಷಗಳ ಹಿಂದಿನಿ0ದ ಮೀನು ಮಾರಾಟ ಮಾಡಿಕೊಂಡು ಬಂದಿದ್ದು, 2010ರಲ್ಲಿ ಪಟ್ಟಣ ಪಂಚಾಯತ ವತಿಯಿಂದ ಮೀನು ಮತ್ತು ಮಾಂಸ ಮಾರಾಟಕ್ಕೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ, ಶಾಶ್ವತ ಕಟ್ಟಡ ನಿರ್ಮಿಸಲಾಗಿದೆ. ಟೆಂಡರ್ ಮೂಲಕ ಕಟ್ಟೆಗಳನ್ನು ವ್ಯಾಪಾರಸ್ಥರಿಗೆ ನೀಡಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಕಳೆದ 2- 3 ವರ್ಷಗಳ ಹಿಂದೆ ಕೊರೊನಾ ಸೋಂಕು ತಡೆಯಲು ಆದೇಶಿಸಲಾದ ಲಾಕ್‌ಡೌನ್ ಸಮಯದಲ್ಲಿ ಜನರು ಒಟ್ಟುಗೂಡಬಾರದೆಂಬ ಕಾರಣದಿಂದ ಮನೆಗಳಿಗೆ ತೆರಳಿ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಮಯದಲ್ಲಿ ಹೊರಗಿನಿಂದ ಬಂದ ಮಹಿಳೆಯರು ಎಲ್ಲೆಂದರಲ್ಲಿ ಮೀನಿನ ಮಾರಾಟ ಮಾಡಲು ಪ್ರಾರಂಭಿಸಿದ್ದರು ಎಂದು ತಿಳಿಸಿದ್ದಾರೆ.
ಈಗ ಕೋವಿಡ್ ದೂರವಾಗಿ, ಸರ್ಕಾರ ಕಠಿಣ ನಿಯಮಾವಳಿಗಳನ್ನು ತೆಗೆದಿದ್ದರೂ, ಹೊರ ಭಾಗದಿಂದ ಬಂದ ಮಹಿಳೆಯರು ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಗ್ರಾಹಕರು ಇವರಲ್ಲಿಯೇ ಮೀನು ಖರೀದಿಸುತ್ತಿದ್ದರು. 1500 ರೂ.ನಿಂದ 5200 ರೂಪಾಯಿ ತಿಂಗಳ ಬಾಡಿಗೆ ನೀಡಿ ಕಟ್ಟೆ ಪಡೆದ ಮೀನು ಮಾರುಕಟ್ಟೆಯ ಮೀನು ಮಾರಾಟಗಾರರಿಗೆ ಹಾನಿಯಾಗುತ್ತಿತ್ತು. ಜೊತೆಗೆ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡಿ ಮೀನಿನ ನೀರು ಜೊತೆಗೆ ಕೊಳೆತ ಮೀನುಗಳು ಎಸೆಯುವ ಕಾರಣಕ್ಕೆ ದುರ್ಗಂಧ ಪರಿಸರದಲ್ಲಿ ಪ್ರಸರಿಸಿ ಸಾರ್ವಜನಿಕರಿಂದ ಬಹಳಷ್ಟು ಆಪಾದನೆಗಳನ್ನು ಮೀನು ಮಾರಾಟಗಾರರು ಎದುರಿಸಬೇಕಾಗಿತ್ತು. ಈ ಎಲ್ಲ ಕಾರಣಕ್ಕಾಗಿ ಪಟ್ಟಣ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿ, ಅಧಿಕೃತ ಮೀನು ಮಾರುಕಟ್ಟೆಯನ್ನು ಹೊರತುಪಡಿಸಿ ಹೊರ ಪ್ರದೇಶದಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಲಿಖಿತವಾಗಿ ಮತ್ತು ಮೌಖಿಕವಾಗಿ ಹೇಳಲಾಗಿತ್ತು. ನಂತರ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ಅಧ್ಯಕ್ಷರು ಅಧಿಕಾರಿಗಳು ಠರಾವೊಂದನ್ನು ನಿರ್ಣಯಿಸಿ ಪಟ್ಟಣದ ಯಾವುದೇ ಭಾಗದಲ್ಲಿ ಮೀನು ಮಾರಾಟ ಮಾಡಬಾರದು ಎಂದು ನಿಲುವಿಗೆ ಬಂದಿದ್ದರು. ಅದರಂತೆ ಡಿ.6ರಂದು ಪಟ್ಟಣ ಪಂಚಾಯಿತಿಯವರು ಟಿಎಂಎಸ್ ಪೆಟ್ರೋಲ್ ಪಂಪ್ ಎದುರು ಮೀನು ಮಾರಾಟ ಮಾಡುವವರನ್ನು ತೆರೆವುಗೊಳಿಸಿದ ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸ್ಥಳದಲ್ಲಿ ಇಲ್ಲದೆ ಇದ್ದರೂ ಕೂಡ ಅವರ ಮೇಲೆ ದೌರ್ಜನ್ಯದಂತಹ ಆಪಾದನೆಗಳು ಹೊರಿಸಲಾಗಿದೆ. ಇಂತಹ ಆಪಾದನೆಯನ್ನು ಖಂಡಿಸುತ್ತೇವೆ. ಹೀಗೆ ಆಪಾದನೆ ಮಾಡುವುದರ ಮೂಲಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಎಂದು ಹೇಳಿದ್ದಾರೆ.
ಮತ್ಸ್ಯಗಂಧ ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ಸಂತೋಷ ಮರಾಠಿ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ, ಅಧಿಕೃತ ಮೀನು ಮಾರುಕಟ್ಟೆಯ ಮಾರಾಟಗಾರರು ಪ್ರೋತ್ಸಾಹಿಸಲು ಟ್ಯಾಕ್ಸಿ ಯೂನಿಯನ್ ಉಪಾಧ್ಯಕ್ಷ ಶ್ರೀಕಾಂತ ಪಾಟೀಲ್ ಹಾಗೂ ಸದಸ್ಯರು, ಆಟೋ ಯೂನಿಯನ್ ಸಂಘದ ಉಪಾಧ್ಯಕ್ಷ ಚಂದ್ರು ಭೋವಿ ಹಾಗೂ ಸದಸ್ಯರು, ಗೂಡ್ಸ್ ರಿಕ್ಷಾ ಸಂಘದ ಉಪಾಧ್ಯಕ್ಷ ಅಮಿತ್ ಮರಾಠೆ ಹಾಗೂ ಸದಸ್ಯರು, ಬೋವಿ ವಡ್ಡರ್ ಸಮಾಜದ ಅಧ್ಯಕ್ಷ ಸುರೇಶ ಭೋವಿ, ಮತ್ಸ್ಯಗಂಧ ಮೀನುಗಾರರ ಸಂಘದ ಕಾರ್ಯದರ್ಶಿ ಮುರುಳಿ ಹೆಗಡೆ, ಪ.ಪಂ ಸದಸ್ಯ ನಾಗರಾಜ ಅಂಕೋಲೆಕರ, ಮೀನು ಮಾರಾಟಗಾರರಾದ ಸೈಯದ್ ಯಾಕೂಬ ಸೈಯದ್ ಜಮಾಲ್, ಶೌಕತ್ ಅಲಿ ಬಳಗಾರ, ನಿಸ್ಸಾರ್ ಶೇಖ್ ಕಾಸಿಮ್ (ಚಾಂದ), ಬಸವರಾಜ ಕಾಳಪ್ಪನವರ, ಪ್ರಕಾಶ ವೈದ್ಯ, ಫಾರೂಕ್ ಶೇಖ, ಅಶ್ರಫ್ ಅಲಿ, ಹಸನ್ ಪಿಟಿ (ಶಫಿ), ರಫೀಕ್, ಸಂಜೀವ ಅಂಕೋಲೆಕರ, ಜ್ಞಾನೇಶ್ವರ ಮುಂತಾದವರು ಇದ್ದರು.