ಶಿರಸಿ: ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯವಾದದ್ದು ಎಂದು ವಿಜಯನಗರದ ಅರಸು ವಂಶಸ್ಥ ಆನೆಗುಂದಿಯ ಶ್ರೀಕೃಷ್ಣದೇವರಾಯ ಹೇಳಿದರು.
ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಭೂ ದಾನ ಅಭಿಯಾನ ಶ್ರೀಹರಿ ಪಾದಾರ್ಪಣೆ – ಮಹಾ ಸಮಾರ್ಪಣೆ ಕಾರ್ಯಕ್ರಮದ ಭಾಗವಾಗಿ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅದೇಷ್ಟೋ ದೇವಾಲಯಗಳಲ್ಲಿ ನಿತ್ಯ ಪೂಜೆ ನಡೆಯುತ್ತಿದೆ ಎಂದರೆ ಅದಕ್ಕೆ ಅರಸರ ಕೊಡುಗೆಗಳೂ ಕಾರಣ. ಅರಸರು ದಾನ ದತ್ತಿಗಳನ್ನೂ ದೇವಾಲಯಗಳಿಗೆ ನೀಡಿದ್ದರು ಎಂದ ಅವರು,ವಿದೇಶಗಳಲ್ಲಿ ಕೌಟುಂಬಿಕ ಮೌಲ್ಯಗಳಲಿಲ್ಲ. ಭಾರತ ತನ್ನ ಆದರ್ಶ ಹಾಗೂ ಮೌಲ್ಯಗಳಿಂದ ಜಗತ್ತಿನಲ್ಲಿ ಶ್ರೇಷ್ಠವಾಗಿದೆ. ಧರ್ಮ ಸಂಸ್ಕೃತಿ ನಾವೇ ಉಳಿಸಬೇಕಾಗಿದೆ ಎಂದರು.
ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ಮಾತನಾಡಿ, ಇತಿಹಾಸ ಮರುಕಳಿಸುತ್ತದೆ ಎಂಬುದಕ್ಕೆ ಮಂಜುಗುಣಿ ಸಾಕ್ಷಿಯಾಗಿದೆ. ಹಿಂದೆ ವಿಜಯನಗರ ಅರಸರು ಮಂಜುಗುಣಿಗೆ ಭೂ ದಾನ ಮಾಡಿದ್ದರು. ಇಂದು ಅದೇ ವಂಶಸ್ಥರಿಂದ ಭೂ ದಾನದ ಮಹಾಸರ್ಪಣೆಯಲ್ಲಿ ಪಾಲ್ಗೊಳ್ಳುವಂತೆ ಆಗಿದೆ ಎಂದರು.
ರಾಣಿ ರತ್ನಶ್ರೀರಾಯ ಮಾತನಾಡಿ, ಪ್ರತಿಯೊಂದು ಮನೆಯಲ್ಲೂ ಹೆಣ್ಣು ಕಲಿಯಬೇಕು. ಕೌಟುಂಬಿಕ ಒಗ್ಗಟ್ಟು ಉಳಿಸಬೇಕು ಎಂದರು.
ಸಿಎ ಮಂಜುನಾಥ ಶೆಟ್ಟಿ, ಅರ್ಬನ್ ಬ್ಯಾಂಕ್ ಎಂಡಿ ಆರತಿ ಶೆಟ್ಟರ್, ಅಧ್ಯಕ್ಷ ಜಯದೇವ ನಿಲೇಕಣಿ, ಸಿಎ ಅಂಜನಾ ಶೆಟ್ಟಿ, ಅನಂತ ಪೈ ಇತರರು ಇದ್ದರು. ಭಗವದ್ ಸ್ತುತಿ ನಾಗಶ್ರೀ ಭಟ್ಟ ಹಾಡಿದರು. ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಮಂಜುಗುಣಿ ಪ್ರಾಸ್ತಾವಿಕ ಮಾತನಾಡಿದರು. ಮಹಾಬಲೇಶ್ವರ ಹೆಗಡೆ ಕೂರ್ಸೆ ವಂದಿಸಿದರು. ಕರುಣಾಕರ ಕಲ್ಲಳ್ಳಿ ನಿರ್ವಹಿಸಿದರು.
ಭಾರತೀಯರೆಲ್ಲ ಪ್ರಾಚೀನ ಸಂಸ್ಕೃತಿಯತ್ತ ಮರಳಬೇಕಿದೆ. – ಶ್ರೀಕೃಷ್ಣದೇವರಾಯ, ವಿಜಯನಗರ ವಂಶಸ್ಥರು.
ದೇವಾಲಯಗಳಿಗೆ ಹೊಂದಿರುವ ಇತಿಹಾಸ, ಆ ದೇವಾಲಯಕ್ಕೆ ಇರುವ ಪ್ರಭೆ. ಮಂಜುಗುಣಿಯಲ್ಲಿ ಇಂದು ಇತಿಹಾಸ ಮರುಕಳಿಸಿದೆ. – ಶ್ರೀನಿವಾಸ ಭಟ್ಟ ಮಂಜುಗುಣಿ, ಕ್ಷೇತ್ರದ ಪ್ರಧಾನ ಅರ್ಚಕರು.