ಶಿರಸಿ: ಸಂಗೀತಕ್ಕೆ ತಲೆದೂಗುತ್ತ ಗಿಡಮರಗಳೂ ಕೂಡ ಒಳ್ಳೆಯ ಇಳುವರಿಯನ್ನ ನೀಡುತ್ತವೆ ಎನ್ನುವ ಸಂಗತಿ ಸಂಗೀತಕ್ಕಿರುವ ಶಕ್ತಿಯನ್ನ ಪ್ರತಿಪಾದಿಸುವಾಗ, ಇನ್ನು ಸಂಘಜೀವಿ ಮಾನವನ ಸಂತೋಷ, ನೆಮ್ಮದಿ ಹಾಗೂ ಸಾಧನೆಗೆ ಸಂಗೀತ ಶ್ರೇಷ್ಠ ಸಾಧನವಾಗಿದೆ. ನಮ್ಮ ಬದುಕಿನ ಬಹುಪಾಲನ್ನ ಮೊಬೈಲ್ ಟೀವಿ ಹಾಗೂ ಅಂತರ್ಜಾಲ ಕಬಳಿಸಿರುವಾಗ ಸಂಗೀತ ಸಾಹಿತ್ಯ ರೀತ್ಯಾ ಉತ್ತಮ ಹವ್ಯಾಸಗಳು ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ನಮ್ಮ ಸಂಸ್ಕೃತಿ ಪರಂಪರೆಗಳನ್ನ ಉಳಿಸಿ ಬೆಳೆಸುವ ಕೈಂಕರ್ಯಕ್ಕೆ ಸಾಥ್ ನೀಡಬಲ್ಲ ಸಂಗತಿಯಾಗಿದೆ. ಆ ನಿಟ್ಟಿನಲ್ಲಿ ಕದಂಬ ಕಲಾ ವೇದಿಕೆಯ ಶಿರಸಿ ರತ್ನಾಕರ ಹಾಗೂ ಸಂಘಡಿಗರ ಈ ಸಾಧನೆ ಶ್ಲಾಘನೀಯವಾದುದು. ಅತ್ಯುತ್ತಮವಾದಂತಹ ಭಕ್ತಿ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿ ಸೊಗಸಾದ ಸಂಗೀತದೊ0ದಿಗೆ ಭಕ್ತಿಗೀತೆಯೊಂದನ್ನ ರಚಿಸಿ ತಾಯಿ ಶ್ರೀ ಮಾರಿಕಾಂಬೆಗೆ ಅರ್ಪಣೆ ಮಾಡುವುದರ ಮೂಲಕ ಸಂಗೀತ ಹಾಗೂ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಲ್ಲದೆ ದೇವಿಯ ಸದ್ಭಕ್ತರೆಲ್ಲ ಗುನುಗುವಂತೆ ಮಾಡಿರುವ ಭಕ್ತಿಗೀತೆ ಸಾಹಿತ್ಯ-ಸಂಗೀತ ಎಲ್ಲ ದೃಷ್ಟಿಯಿಂದಲೂ ಸರ್ವಕಾಲಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಸಹಾಯಕ ಆಯುಕ್ತ ದೇವರಾಜ್ ಆರ್. ನುಡಿದರು.
ಅವರು ಡಿ. 8ರಂದು ಕದಂಬ ಕಲಾ ವೇದಿಕೆ ಶಿರಸಿ ಹಾಗೂ ಕದಂಬ ಮ್ಯೂಸಿಕ್ ಸ್ಟುಡಿಯೋ ಸಾರಥ್ಯದಲ್ಲಿ ಹೊರಹೊಮ್ಮಿದ ತಾಯಿ ಶ್ರೀ ಮಾರಿಕಾಂಬೆಯ ಕುರಿತಾದ ಶಿರಸಿ ರತ್ನಾಕರ ಸಾಹಿತ್ಯದಲ್ಲಿ ಮೂಡಿಬಂದ ‘ಅಂಬೆ ಶ್ರೀ ಮಾರಿಕಾಂಬೆ’ ಭಕ್ತಿಗೀತೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಕ್ತಿಗೀತೆಯನ್ನ ಲೋಕಾರ್ಪಣೆಗೊಳಿಸಿ ಅದರ ನಿರ್ಮಾಣದ ಜವಾಬ್ದಾರಿ ಹೊತ್ತ ಡಾ.ನಾಗೇಶ್ ನಾಯ್ಕ ಕಾಗಾಲ್ ಮಾತನಾಡಿ ಇದು ನಾನು ಮಾಡಿದೆ ಅನ್ನುವುದಕ್ಕಿಂತ ತಾಯಿ ಶ್ರೀ ಮಾರಿಕಾಂಬೆ ನನಗೆ ಇಂತಹ ಒಂದು ಸದಾವಕಾಶಕ್ಕೆ ಪ್ರೇರೇಪಣೆ ಮಾಡಿದಳು ಎಂದು ಭಾವಿಸುತ್ತೇನೆ. ಸುಂದರವಾದ ಸಾಹಿತ್ಯ ಹಾಗೂ ಸಂಗೀತ ನನ್ನ ಮನವನ್ನು ಸೆಳೆಯಿತು. ಎಂದರು.
ಕಾವ್ಯ ಪರಿಚಯವನ್ನು ಮಾಡಿದ ಹಿರಿಯ ಚಿಂತಕ ಪ್ರೊ. ಕೆ.ಎನ್.ಹೊಸ್ಮನಿ ಮಾತನಾಡಿ ನನ್ನ ಶಿಷ್ಯ ರತ್ನಾಕರ ನಮ್ಮ ಅಧಿದೇವತೆಯ ಕುರಿತಾಗಿ ಬರೆದಿರುವ ಭಕ್ತಿ ಸಾಹಿತ್ಯದ ಪದಪದಗಳಲ್ಲೂ ಭಾವಪರವಶತೆ ಇದೆ. ಮೈಮನವನ್ನ ರೋಮಾಂಚನಗೊಳಿಸಬಲ್ಲ ಸಾಹಿತ್ಯ ಸಂಗೀತ ಗಟ್ಟಿತನದ ಸಂಕೇತವಾಗಿದೆ ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಮಾಧ್ಯಮ ಸಂಪಾದಕ ಶ್ರೀಧರ ಮಂಗಳೂರು ಮಾತನಾಡಿ ಭಕ್ತಿ ಸಾಹಿತ್ಯದ ಹೊರತಾಗಿ ಎಲ್ಲ ಪ್ರಕಾರದ ಸಾಹಿತ್ಯಗಳೂ ಕೂಡ ಇಂದ್ರೀಯ ಪ್ರಚೋದಕಗಳಾಗಿದ್ದರೆ ಭಕ್ತಿ ಸಾಹಿತ್ಯ ಮಾತ್ರ ಶರಣಾಗತಿ ಹಾಗೂ ಸಮರ್ಪಣಾ ಭಾವದಿಂದ ಕೂಡಿರುತ್ತದೆ. ಅಂತಹ ಸಮರ್ಪಣಾ ಭಾವದಿಂದ ರಚಿತಗೊಂಡ ಶ್ರೋತೃಗಳಲ್ಲಿ ರೋಮಾಂಚನಗೊಳಿಸಬಲ್ಲ ಈ “ಅಂಬೆ ಶ್ರೀ ಮಾರಿಕಾಂಬೆ” ನಿಜವಾದ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯ ಸಂಗೀತದಿ0ದ ಮಾತ್ರ ನಿಜವಾದ ನೆಮ್ಮದಿ ಸಂತೋಷ ಧನ್ಯತಾ ಭಾವ ಮೂಡಲು ಸಾಧ್ಯ ಎಂದರು.
ಭಕ್ತಿಗೀತೆಯ ರಚನಕಾರ ಶಿರಸಿ ರತ್ನಾಕರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಈ ಸಾಹಿತ್ಯ ಆ ತಾಯಿಯ ಪ್ರೇರಣೆ ಅಷ್ಟೆ. ನಾನು ನೆಪಮಾತ್ರ. ಈ ಗೀತೆಯನ್ನು “Shira Music Crew” youtube channelನಲ್ಲಿ ವೀಕ್ಷಿಸಬಹುದಾಗಿದೆ. ಇದು ಈ ಧ್ವನಿಸುರುಳಿಯ ಶೀರ್ಷಿಕೆ ಗೀತೆಯಾಗಿದ್ದು ಇನ್ನು 7ಗೀತೆಗಳು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಧನಂಜಯ ಬಳಗಂಡಿ ಉಪಸ್ಥಿತರಿದ್ದರು. ಉಮಾಕಾಂತ ಗೌಡ ನಿರೂಪಿಸಿದರು. ಲಕ್ಷ್ಮಣ್ ಶೇಟ್ ವಂದಿಸಿದರು. ಶಿರರ ಪರಿಕಲ್ಪನೆಯಲ್ಲಿ ಹಾಗೂ ಸಾಗರದ ಅಜಯ್ ಹೊಳ್ಳ ಹಾಗೂ ಮೊನಿಕ್ ರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಗೂ ಕದಂಬ ಮ್ಯೂಸಿಕ್ ಸ್ಟುಡಿಯೋ ದಲ್ಲಿ ಧ್ವನಿಮುದ್ರಣಗೊಂಡಿರುವ ಭಕ್ತಿಗೀತೆಗೆ ದಿವ್ಯಾ ಶೇಟ್, ಜ್ಯೋತಿ ರತ್ನಾಕರ್, ಶುಭ ಯಶವಂತ್ ,ಶಿಲ್ಪಾ ಭಟ್, ಸೀಮಾ, ಪೂರ್ವಿ ಶೆಟ್ಟಿ ಹಾಗೂ ದೀಕ್ಷಾ ದನಿಯಾದರು. ನಂತರ ರಾತ್ರಿ 7.30ಕ್ಕೆ ತಾಯಿ ಶ್ರೀ ಮಾರಿಕಾಂಬೆಯ ಸನ್ನಿಧಾನದಲ್ಲಿ ಕದಂಬ ಕಲಾ ವೇದಿಕೆಯ ಗಾಯಕರು ಸಮೂಹಗಾಯನದ ಗೀತಾರ್ಪಣೆ ಮಾಡಿ ಭಕ್ತಮನಗಳನ್ನು ಗೆದ್ದರು.