ಕಾರವಾರ: ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಕರೆಯುವುದರಿಂದ ಎಸ್‌ಸಿ- ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಇದನ್ನು ತಡೆಯಲು ಹಾಗೂ ಸರ್ವರಿಗೂ ಸಮಾನ ಕಾಮಗಾರಿ ಸಿಗುವಂತಾಗಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘಕ್ಕೆ ಕಾಮಗಾರಿಗಳ ಮಾಹಿತಿ ನೀಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ದೀಪಕ ಕುಡಾಳಕರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಘದಿಂದ ಈ ಬಗ್ಗೆ ಠರಾವು ಮಾಡಿದ್ದೇವೆ. ಇಲಾಖೆಗಳಿಗೂ ಈ ಬಗ್ಗೆ ಪತ್ರವನ್ನೂ ಬರೆದಿದ್ದೇವೆ. ಇಲಾಖೆಗಳಿಂದ ಸ್ಥಳೀಯ ಎಸ್‌ಸಿ- ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆಯ ವೇಳೆ ಅನ್ಯಾಯವಾಗುತ್ತಿದೆ. ಸ್ಥಳೀಯ ಎಸ್‌ಸಿ- ಎಸ್‌ಟಿ ಗುತ್ತಿಗೆದಾರರ ಹೆಸರಿನಲ್ಲಿ ಇನ್ಯಾರೋ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದಾಗಿ ಕಾಮಗಾರಿಯ ಗುಣಮಟ್ಟವೂ ಕಡೆಗಣನೆಯಾಗುತ್ತಿದ್ದು, ಜೊತೆಗೆ ಯಾರೋ ಕಾಮಗಾರಿ ಮಾಡಿ ಮತ್ಯಾರದ್ದೋ ಹೆಸರು ಹಾಳಾಗುವಂತಾಗಿದೆ. ಇದನ್ನು ತಪ್ಪಿಸಲು ಸಂಘದಲ್ಲಿ ಎಲ್ಲರೂ ಸೇರಿ ಒಂದು ನಿರ್ಣಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಸಂಘದ ಗಮನಕ್ಕೆ ತಂದಲ್ಲಿ ನಾವೇ ಅದನ್ನು ನಮ್ಮೆಲ್ಲ ಗುತ್ತಿಗೆದಾರರಿಗೆ ಸರಿಸಮವಾಗಿ ಹಂಚಿಕೆ ಮಾಡಲಿದ್ದೇವೆ. ಇದರಿಂದಾಗಿ ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಅನುಕೂಲವಾಗಲಿದೆ. ಇ- ಟೆಂಡರ್ ಪ್ರೊಕ್ಯೂರ್‌ಮೆಂಟ್ ಪ್ರಕಾರ ರಾಜ್ಯದ ಯಾವುದೇ ಗುತ್ತಿಗೆದಾರರು ಟೆಂಡರ್ ಹಾಕಲು ಅವಕಾಶವಿರುತ್ತದೆ. ಆದರೆ ಸಾಮಾನ್ಯ ಗುತ್ತಿಗೆದಾರರು ಈ ಬಗ್ಗೆ ಸಭೆ ಮಾಡಿ, 50 ಲಕ್ಷದ ಒಳಗಿನ ಕಾಮಗಾರಿಗಳನ್ನು ಆಯಾ ತಾಲೂಕಿನ ಗುತ್ತಿಗೆದಾರರೇ ಮಾಡಬೇಕು. ಬೇರೆ ತಾಲೂಕಿನವರು ಮಾಡಬಾರದು ಎಂದು ನಿರ್ಣಯಿಸಿದ್ದಾರೆ. ಅದರಂತೆ ನಾವು ಕೂಡ ನಮ್ಮ ಸಂಘಕ್ಕೆ ಗುತ್ತಿಗೆ ಮಾಹಿತಿ ನೀಡಿದರೆ ನಾವೆಲ್ಲರಿಗೂ ಹಂಚುವ ನಿರ್ಣಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಲಿಷಾ ಎಲಕಪಾಟಿ, ಚಂದ್ರಕಾAತ ಆಗೇರ, ತಿಮ್ಮಾರೆಡ್ಡಿ, ಧರ್ಮರಾಯ ಮೂಡಸಾಲಿ, ಬೋಜರಾಜ ದೊರೆಸ್ವಾಮಿ ಮುಂತಾದವರಿದ್ದರು.
ಪದಾಧಿಕಾರಿಗಳ ಆಯ್ಕೆ
ಇತ್ತೀಚಿಗೆ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾಗಿ ದೀಪಕ ಕುಡಾಲಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಕಾ0ತ ಆಗೇರ, ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಷಾ ಎಲಕಪಾಟಿ, ಖಜಾಂಚಿಯಾಗಿ ಧರ್ಮರಾಯ ಮೂಡಸಾಲಿ, ಸಹಕಾರ್ಯದರ್ಶಿಯಾಗಿ ಕೃಷ್ಣ ಮಲಸಮುದ್ರ, ಸಹ ಖಜಾಂಚಿಯಾಗಿ ರಾಜು ವಡ್ಡರ ಆಯ್ಕೆಯಾಗಿದ್ದಾರೆ.
ಸಂಘದ ಸದಸ್ಯರಾಗಿ ಪ್ರಕಾಶ ವಡ್ಡರ, ಚಿನ್ನಾ ಬಾಬು ಎಲಕಪಾಟಿ, ಲಲಿತಾ ದೇವರಸ, ಟೋನಿ ಎಲಕಪಾಟಿ, ರಾಜೇಂದ್ರ ಮಾದರ, ಅಕ್ಷಯ, ಸುಭಾಷ ವಡ್ಡರ, ಆನಂದು ತೆರದಾಳ, ಬಸವರಾಜ ಹಳಬರ, ಬೋಜರಾಜ ದೊರೆಸ್ವಾಮಿ, ದುಂಡಪ್ಪ ಬಂಡಿವಡ್ಡರ, ಶಾಂತಾ ಎಲಕಪಾಟಿ ಅಯ್ಕೆಯಾಗಿದ್ದಾರೆ.
***