ಯಲ್ಲಾಪುರ: ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರ ಮನೆಯಲ್ಲಿ ಗುರುವಾರ ವಾಸ್ತವ್ಯ ಹೂಡಿ, ಸಮುದಾಯದವರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ಹುಬ್ಬಳ್ಳಿಯಿಂದ ಆಗಮಿಸಿದ ಸಚಿವರನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಇನ್ನೋರ್ವ ತಹಶೀಲ್ದಾರ ಸಿ.ಜಿ.ನಾಯ್ಕ, ಬಿಜೆಪಿ ಮಂಡಳಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಅವರು ರಾಷ್ಟ್ರೀಯ ಹೆದ್ದಾರಿ 63ರ ಕಾಮಾಕ್ಷಿ ಪೆಟ್ರೋಲ್ ಪಂಪ್ ಬಳಿ ಯಲ್ಲಾಪುರಕ್ಕೆ ಬರಮಾಡಿಕೊಂಡರು. ಬಳಿಕ ಸಚಿವರು ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಪರಿಶಿಷ್ಟ ವರ್ಗಗಳ ಸಿದ್ದಿ ಸಮುದಾಯದ ಜನರೇ ಹೆಚ್ಚಿದ್ದರು.
ಈ ವೇಳೆ ತುಳಸಿದಾಸ ಪಾವಸ್ಕರ ಮಾತನಾಡಿ, ನಕಲಿ ಜಾತಿಯವರಿಂದ ಇತರೆ ನೈಜ ಪರಿಶಿಷ್ಟ ಜಾತಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ವಕೀಲರಾದ ಜಯರಾಮ ಸಿದ್ದಿ, ಸಿದ್ದಿ ಜನಾನಗದವರು ಪರಶಿಷ್ಟ ಪಂಗಡಕ್ಕೆ ಸೇರಿದರೂ ಕೂಡ ಅವರಿಗೆ ಸೂಕ್ತ ಭದ್ರತೆ, ಸರ್ಕಾರದ ಸೌಲಭ್ಯ ದೊರಕುತ್ತಿಲ್ಲ. ಸಿದ್ದಿ ಜನಾಂಗದವರ ವಾಸಿಸುವ ಸ್ಥಳಗಳಲ್ಲಿ ಮೂಲಭೂತ ಸೌಭ್ಯಗಳು ಇಲ್ಲ. ಸಿದ್ದಿ ಜನಾಂಗದವರ ಅಭಿವೃದ್ಧಿಗೆ ಸರ್ಕಾರ ಪ್ರಯತ್ನ ಮಾಡಬೇಕೆಂದು ಹೇಳಿದರು.
ಕಳೆದ 40 ವರ್ಷದಿಂದ ಗಂಗಾಧರ ತೋಟದಲ್ಲಿ 30ಕ್ಕೂ ಹೆಚ್ಚು ಕುಟುಂಬದವರು ವಾಸಿಸುತ್ತಿದ್ದಾರೆ. ಅವರಿಗೆ ನೀರು, ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಮಹಿಳೆಯೋರ್ವರು ತಿಳಿಸಿದರು. ಮಹಿಳೆಯ ಮಾತಿಗೆ ಸ್ಪಂದಿಸಿದ ಶ್ರೀರಾಮುಲು, ತಹಶೀಲ್ದಾರರನ್ನು ಕರೆದು, 40 ವರ್ಷದಿಂದ ವಿದ್ಯುತ್ ಇಲ್ಲವೆಂದರೆ ಇದು ಹೀನಾಯ ಸ್ಥಿತಿ. ಎಷ್ಟೇ ಕಷ್ಟವಾದರೂ ಅವರ ಮನೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು. ಉದ್ಯಮ ನಗರವನ್ನು ವಾಸ್ತವ್ಯಕ್ಕೆ ಬಳಸಲು ಸರಕಾರದಲ್ಲಿ ಅವಕಾಶವಿಲ್ಲ. ಹೀಗಾಗಿ ಸ್ವಲ್ಪ ದೂರವಾದರೂ ಶಾಶ್ವತ ವಾಸ್ತವ್ಯದ ಬಗ್ಗೆ ಅಲ್ಲಿಯ ಜನರಿಗೆ ವ್ಯವಸ್ಥೆ ಮಾಡಬೇಕು ಎಂದು ತಹಶೀಲ್ದಾರರಿಗೆ ಶ್ರೀರಾಮುಲು ಸಲಹೆ ನೀಡಿದರು. ನಂತರ ಅಲ್ಲಿಂದ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಗೋಡ ಕೆರೆಕುಂಬ್ರಿಯ ಗಣಪತಿ ಸಿದ್ದಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶಿರಸಿ ವ್ಯವಸ್ಥಾಪಕ ಕೇಶವಮೂರ್ತಿ, ಪ್ರಥಮ ದರ್ಜೆ ಸಹಾಯಕ ನಾಗೇಶ ಮಲಮೇತ್ರಿ, ವಾರ್ಡನ್ ಕಿರಣ, ವಾಲ್ಮಿಕಿ ಸಮಾಜದ ಮುಖಂಡ ಭೀಮಸಿ ವಾಲ್ಮಿಕಿ ಮುಂತಾದವರು ಇದ್ದರು.