Slide
Slide
Slide
previous arrow
next arrow

ಬಿಸಿಎಂ ಹಾಸ್ಟೆಲ್‌ಗಳಿಗೆ 100 ಕೋಟಿ ವೆಚ್ಚದ ಮೂಲ ಸೌಕರ್ಯಾಭಿವೃದ್ಧಿ ಪ್ರಸ್ತಾವನೆಗೆ ಸಚಿವ ಕೋಟ ಪೂಜಾರಿ ಅನುಮೋದನೆ

300x250 AD

ಕಾರವಾರ: ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ರಾಜ್ಯದ ವಿದ್ಯಾರ್ಥಿನಿಲಯಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವ ಪ್ರಸ್ತಾವನೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅನುಮೋದನೆ ನೀಡಿದರು.
ವಿಕಾಸಸೌಧದಲ್ಲಿ ಹಿಂದುಳಿದ ವರ್ಗಗಳ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಅವರು ಮಾತನಾಡಿದರು. ಬಿಸಿಎಂ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಹಾಸಿಗೆ, ಮಂಚ, ಚಪಾತಿ ತಯಾರಿಕೆ ಯಂತ್ರಗಳು, ಸೋಲಾರ್ ಮತ್ತು ಗೀಸರ್ ಗಳನ್ನು ಒದಗಿಸುವ ಪ್ರಸ್ತಾವನೆಗೆ ಸಚಿವರು ಒಪ್ಪಿಗೆ ಸೂಚಿಸಿ, ಖರೀದಿ ವೇಳೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದೆಲ್ಲೆಡೆ ಶಿಥಿಲವಾಗಿರುವ ಹಾಸ್ಟೆಲ್ ಕಟ್ಟಡಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೆ ಸಚಿವರು ಒಪ್ಪಿಗೆ ಸೂಚಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ, ದೀನದಯಾಳ್ ಉಪಾಧ್ಯಾಯ ಮತ್ತು ಕನಕದಾಸ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಪ್ರಗತಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಕಾಲರ್ ಶಿಪ್ ಗಳ ವಿತರಣೆ ಹಾಗೂ ಸಮುದಾಯ ಭವನಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಾಮರ್ಶೆ ನಡೆಸಿದರು.
ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಆಯುಕ್ತ ಕೆ.ಎ.ದಯಾನಂದ, ವಿವಿಧ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.


ಉಚಿತ ವಿದ್ಯುತ್ ಯೋಜನೆ ತ್ವರಿತ ಅನುಷ್ಠಾನಕ್ಕೆ ಸಚಿವ ಕೋಟ ಸೂಚನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಯೋಜನೆಯ ಅನುಷ್ಠಾನ ತ್ವರಿತಗೊಳಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ.ಜಾತಿ, ಪಂಗಡ ಸಮುದಾಯಕ್ಕೆ ಪ್ರತಿ ತಿಂಗಳು 75 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆಯ ವಾಸ್ತವಿಕ ಅನಷ್ಠ್ಠಾನ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಯೋಜನೆ ಜಾರಿಗೆ ಎದುರಾಗುವ ಅಡೆತಡೆ ನಿವಾರಿಸಲು ನಿಯಮಗಳನ್ನು ಸರಳೀಕರಿಸಬೇಕು ಎಂದು ಅವರು ಸೂಚಿಸಿದರು.
ಡಿಬಿಟಿ ಹೊರತುಪಡಿಸಿ ಸರಳ ಮಾರ್ಗಗಳಲ್ಲಿ ಯೋಜನೆ ಜಾರಿ ಮಾಡಿ. ಇದಕ್ಕೆ ಪರ್ಯಾಯ(ಬದಲೀ) ವ್ಯವಸ್ಥೆ ರೂಪಿಸುವಂತೆ ಸಚಿವರು ಸೂಚನೆ ನೀಡಿದರು. ಎಸ್ಕಾಂಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿ ಕುಟುಂಬಗಳ ವಿದ್ಯುತ್ ಶುಲ್ಕ ವಸೂಲಿ ಮತ್ತು ಪರಿಹಾರ ಕ್ರಮಗಳಿಗೆ ಮಾರ್ಗೋಪಾಯ ಕಂಡುಕೊಳ್ಳಬೇಕು,ಆದರೆ ಯೋಜನೆಯ ತ್ವರಿತ ಅನುಷ್ಠಾನ ಇಂದಿನ ಅಗತ್ಯ. ಈ ಯೋಜನೆಗೆ ವಾರ್ಷಿಕ 800 ಕೋಟಿ ರೂ. ಲಭ್ಯವಾಗುತ್ತಿದೆ. ಮುಂದೆ ಇದು ಏರಿಕೆ ಆಗಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ವಿವರ ನೀಡಿದರು.
ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಕುಮಾರ್ ನಾಯಕ್ ಜಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಸಲಹೆಗಾರ ಡಾ.ಇ,ವೆಂಕಟಯ್ಯ, ಇ ಆಡಳಿತ ಇಲಾಖೆ ನಿರ್ದೇಶಕ ದಿಲೀಶ್ ಸಾಮಿ ಹಾಗೂ ಇಂಧನ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top