ಯಲ್ಲಾಪುರ: ಪಟ್ಟಣ ವ್ಯಾಪ್ತಿಯಲ್ಲಿ ಅಂಕೋಲಾದಿ0ದ ಬಂದು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾರವಾರದ ರಾಷ್ಟ್ರೀಯ ಮೀನುಗಾರರ ಸಂಘಟನೆ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಕೊರೊನಾ ಸಮಯದಲ್ಲಿ ಅಂಕೋಲಾ ಕಡೆಯಿಂದ ಬಂದ ಕೆಲವು ಮಹಿಳೆಯರು ಯಲ್ಲಾಪುರದ ಜೋಡುಕೆರೆಯ ಮೇಲೆ ಮತ್ತು ಇನ್ನಿತರ ಕಡೆಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಈ ಮೀನು ಮಾರಾಟಗಾರರಿಗೆ ಕೆಲವು ಜನ ಬೆಂಬಲ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದರೆ, ಹಲವಾರು ಜನ ಮೀನಿನ ನೀರಿನಿಂದ ಆಗುತ್ತಿರುವ ದುರ್ವಾಸನೆಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಯಲ್ಲಾಪುರ ಮೀನು ಮಾರುಕಟ್ಟೆಯಲ್ಲಿ ಬಾಡಿಗೆ ನೀಡಿ ಕಟ್ಟೆ ಪಡೆದ ಹಲವಾರು ಮೀನು ಮಾರಾಟಗಾರರು ಹೊರ ಪ್ರದೇಶದಿಂದ ಬಂದು ಅಲ್ಲಲ್ಲಿ ಮೀನು ಮಾರಾಟ ಮಾಡುವುದರಿಂದ ತಮ್ಮ ವ್ಯಾಪಾರಕ್ಕೆ ಹಾನಿಯಾಗುತ್ತಿದೆ ಎಂದು ಬಾಡಿಗೆ ನೀಡಲು ಹಿಂದೇಟು ಹಾಕುತ್ತಿದ್ದರು.
ಹೀಗಾಗಿ ಪಟ್ಟಣ ಪಂಚಾಯಿತಿಯವರು ಹೊರ ಪ್ರದೇಶದಿಂದ ಬಂದು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಮೀನು ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡುವಂತೆ ಹಲವಾರು ಬಾರಿ ತಿಳಿಸಿ ಹೇಳಿದ್ದರು. ಆದರೂ ಕೂಡ ಜನವಸತಿ ಪ್ರದೇಶಗಳಲ್ಲಿ ಮೀನು ಮಾರಾಟ ಮುಂದುವರೆದಿತ್ತು. ಬುಧವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಇನ್ನಿತರ ಸಿಬ್ಬಂದಿಗಳು ಟಿಎಂಎಸ್ ಪೆಟ್ರೋಲ್ ಪಂಪ್ ಎದುರು ಹೊರ ಪ್ರದೇಶದಿಂದ ಬಂದು ಮೀನು ಮಾರಾಟಗಾರರನ್ನು ಮೀನು ಮಾರಾಟ ಮಾಡದಂತೆ ತಡೆಯಲು ಪ್ರಯತ್ನಿಸಿದರು. ಈ ಸಮಯದಲ್ಲಿ ಮೀನು ಮಾರಾಟಗಾರರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತೆ ವಾಗ್ವಾದ ನಡೆದಿದೆ.
ಮಾರಾಟಕ್ಕೆ ತಂದ ಮೀನುಗಳ ಕೆಲವು ಭಾಗವನ್ನು ನೆಲಕ್ಕೆ ಚೆಲ್ಲಿ ಹಾಕಿರುವುದು ಕಂಡುಬOದಿದೆ. ಈ ಕುರಿತು ಮೀನು ಮಾರಾಟಗಾರ ಮಹಿಳೆಯರು ಉತ್ತರ ಕನ್ನಡ ರಾಷ್ಟ್ರೀಯ ಮೀನುಗಾರರ ಸಂಘಟನೆಗೆ ದೂರು ನೀಡಿದ್ದು ಸಂಘಟನೆಯ ಅಧ್ಯಕ್ಷ ಗಣಪತಿ ಮಾಂಗ್ರೇ ಎಂದಿನ0ತೆ ಮೀನುಗಾರ ಮಹಿಳೆಯರು ತಾಜಾ ಮೀನನ್ನು ಯಲ್ಲಾಪುರಕ್ಕೆ ತಂದು ನಿರ್ಧರಿತ ಸ್ಥಳದಲ್ಲಿ ಮೀನು ಮಾರಾಟ ಮಾಡುತ್ತಿರುವಾಗ ಏಕಾಏಕಿಯಾಗಿ ಅಲ್ಲಿಗೆ ಬಂದ ಯಲ್ಲಾಪುರದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಮೀನುಗಾರ ಮಹಿಳೆಯರನ್ನು ಹೋಡೆಯಲು ಹೋದಾಗ ಹೆದರಿದ ಮೀನುಗಾರ ಮಹಿಳೆಯರು ದೂರ ಸರಿದು ನಿಂತಾಗ ಮಹಿಳೆಯರಿಗೆ ಚೀಫ್ ಆಫೀಸರ್‌ರವರು ಅವಾಚ್ಯ ಶಬ್ದಗಳಿಂದ ಬೈದು ಅವರು ತಂದOತಹ ಮೀನನ್ನು ಕಾಲಿನಿಂದ ಚೆಲ್ಲಿಹಾಕಿ ತಮ್ಮ ಸಿಬ್ಬಂದಿಯ ಸಹಾಯದಿಂದ ಮೀನಿನ ಮೇಲೆ ಯಾವುದೋ ರಾಸಾಯನಿಕ ದ್ರಾವಣವನ್ನು ಚೆಲ್ಲಿ ಸಂಪೂರ್ಣ ಮೀನುಗಳನ್ನು ಹಾಳುಗೆಡವಿದ್ದಾರೆ ಮೀನು ಮಾರಾಟಗಾರ ಮಹಿಳೆಯರಿಗೆ ದೌರ್ಜನ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ.
ಮೀನು ಮಾರಾಟಗಾರ ಮಹಿಳೆಯರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಮೀನು ಮಾರಾಟ ಮಾಡದಂತೆ ತಡೆಯಲು ಹೋದಾಗ ಸಿಬ್ಬಂದಿಗಳಿಗೆ ಹಲವಾರು ಬಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ಮೂರು ಬಾರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿ ರಕ್ಷಣೆ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಬುಧವಾರ ತಾವಾಗಲಿ ಮತ್ತು ಸಿಬ್ಬಂದಿಗಳಾಗಲಿ ಮೀನು ಮಾರಾಟಗಾರ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯವನ್ನು ಎಸಗಿಲ್ಲ. ಪೊಲೀಸ್ ಸಹಾಯ ಪಡೆದು ಮೀನು ಮಾರಾಟ ಮಾಡದಂತೆ ಸೌಮ್ಯವಾಗಿ ತಿಳಿಸಿ ಹೇಳಿದಾಗಲೂ ಕೂಡ ಮಹಿಳೆಯರು ತಮ್ಮೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಯಾವುದೇ ಬಾಡಿಗೆ, ತೆರಿಗೆ ಬರಿಸದೆ ಕಂಡು ಕಂಡಲ್ಲಿ ಮೀನು ಮಾರಾಟ ಮಾಡುತ್ತಿರುವುದರಿಂದ ಮೀನು ಮಾರುಕಟ್ಟೆಯಲ್ಲಿ ಕಟ್ಟೆ ಬಾಡಿಗೆ ಪಡೆದು ಮೀನು ಮಾರಾಟ ಮಾಡುವ ಖಾಯಂ ವ್ಯಾಪಾರಿಗಳು ಸರಿಯಾಗಿ ಬಾಡಿಗೆಯನ್ನು ನೀಡುತ್ತಿಲ್ಲ. ಜನವಸತಿ ಪ್ರದೇಶದಲ್ಲಿ ಮಾಲಿನ್ಯ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಉದ್ದೇಶಕ್ಕಾಗಿ ಜನವಸತಿ ಪ್ರದೇಶದಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ತಡೆಯಲು ಪ್ರಯತ್ನಿಸಲಾಗಿತ್ತು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದ್ದಾರೆ.
ಕಳೆದ ಎರಡು ವರ್ಷದಿಂದ ಜನ ವಸತಿ ಪ್ರದೇಶ ಹಾಗೂ ಕೆರೆಯ ಮೇಲೆ ಮೀನು ಮಾರಾಟ ಮಾಡುವುದನ್ನು ತಡೆಯಲು ಪರ ಮತ್ತು ವಿರುದ್ಧ ಚರ್ಚೆಗಳಾಗುತ್ತಿದ್ದು, ಇದೀಗ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೂರು ನೀಡುವ ಮಟ್ಟಿಗೆ ಬಂದು ತಲುಪಿದೆ. ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.