ಹೊನ್ನಾವರ: ಪರೇಶ ಮೇಸ್ತ ನಿಗೂಢ ಸಾವಿನ ಪ್ರಕರಣ ಸಂಭವಿಸಿ ಇಂದಿಗೆ 5 ವರ್ಷ ಸಂಭವಿಸಿದರೂ, ಇಂದಿಗೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪ್ರತ್ಯಾರೋಪಗಳು ಹೊರತಾಗಿ ಆ ಕುಟುಂಬಕ್ಕೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎನ್ನುವುದು ಪರೇಶ ಒಡನಾಡಿಗಳ ಆರೋಪವಾಗಿದೆ.
ಪಟ್ಟಣದಲ್ಲಿ ನಡೆದ ರಿಕ್ಷಾ ಹಾಗೂ ಬೈಕ್ ನಡುವಿನ ಜಗಳ ಕೋಮು ಸಂಘರ್ಷಕ್ಕೆ ಒಳಗಾಗಿ ನಾಪತ್ತೆಯಾಗಿದ್ದ ಪರೇಶ ಮೇಸ್ತ ಎರಡು ದಿನದ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಈ ಘಟನೆಯು ಹೊನ್ನಾವರ ಮಾತ್ರವಲ್ಲದೇ ಜಿಲ್ಲೆಯ ವಿವಿಧಡೆಯು ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಅಂದು ಆಡಳಿತದಲ್ಲಿದ್ದ ಕಾಂಗ್ರೇಸ್ ಸರ್ಕಾರದ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದರು. ಪರೇಶ ಶವಯಾತ್ರೆಯ ಮೆರವಣೆಗೆಯಲ್ಲಿ ಸಂಸದೆ ಶೋಭಾ, ಅಂದು ಬಿಜೆಪಿಯಿಂದ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಸೇರಿದಂತೆ ಇಂದು ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ ಆಕ್ರೋಶದ ಮಾತುಗಳನ್ನು ಆಡಿ ನಮ್ಮ ಸರ್ಕಾರ ಇದ್ದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಇದು ವ್ಯವಸ್ಥಿತ ಸಂಚು. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದರು.
ಘಟನೆ ನಡೆದಾಗ ದೇಹಲಿಯಲ್ಲಿದ್ದ ಸಂಸದ ಅನಂತ ಕುಮಾರ ಹೆಗಡೆಯವರು ಗೋವಾದವರೆಗೆ ವಿಮಾನ ಮೂಲಕ ಆಗಮಿಸಿ ಅಲ್ಲಿಂದ ಹೊನ್ನಾವರದವೆಗೆ ರಸ್ತೆ ಮಾರ್ಗವಾಗಿ ಆಗಮಿಸಿ ಮೆರವಣೆಗೆಯಲ್ಲಿ ಜೊತೆಯಾಗಿದ್ದರು. ” ಕೆಳಕ್ಕೆ ಬಿದ್ದ ಒಂದೊಂದು ಹನಿ ರಕ್ತಕ್ಕೂ ನ್ಯಾಯ ನೀಡುತ್ತೇವೆ. ನಾವು ಕೈಕಟ್ಟಿ ಕುಳಿತುಕೊಳ್ಳುದಿಲ್ಲ” ಎನ್ನುವ ಮಾತು ಇಡೀ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿತ್ತು.
ತಾಲೂಕಿನಲ್ಲಿ 20 ದಿನಗಳವರೆಗೆ ಪಟ್ಟಣದಲ್ಲಿ ಯಾವುದೇ ವ್ಯಾಪರ ವಹಿವಾಟು ನಡೆದಿರಲಿಲ್ಲ. ಕುಮಟಾ ಶಿರಸಿಯಲ್ಲಿಯು ದೊಡ್ಡ ಮಟ್ಟದ ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗಿ ಮಸೀದಿಗೆ ಕಲ್ಲು, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ನೂರಾರು ಸಂಖ್ಯೆಯ ಯುವಕರ ಮೇಲೆ ಪೊಲೀಸ್ ದೂರು ದಾಖಲಾಗಿ ಬಂಧನಕ್ಕೆ ಒಳಗಾದರು. ಅದು ಈ ಪ್ರಕರಣ ಕಾಂಗ್ರೇಸ್ ಪಾಲಿಗೆ ಬಿಸಿ ತುಪ್ಪವಾಗಿ ಗೆಲ್ಲುವ ವಿಶ್ವಾಸದಲ್ಲಿದ್ದ ಶಾರದ ಶೆಟ್ಟಿ ಮಂಕಾಳ ವೈದ್ಯ, ಸತೀಶ ಸೈಲ್ ಸೋಲು ಅನುಭವಿಸಿ, ಬಿಜೆಪಿಯಿಂದ ಸ್ಪರ್ಧೀಸಿದ್ದ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸಭೆಯ ಒಳಗೆ ಪ್ರವೇಶಿಸಿದ್ದರು.
ಘಟನೆ ನಡೆದು ಪ್ರಥಮ ಪುಣ್ಯ ಸ್ಮರಣೆಯಲ್ಲಿ ಇರ್ವರು ಶಾಸಕರು ಭಾಗವಹಿಸಿದ್ದರೆ, ಎರಡನೇ ವರ್ಷ ಒರ್ವ ಶಾಸಕರು, ಮೂರನೇ ವರ್ಷದಿಂದ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಸೇರುವ ಸ್ಥಿತಿ ಎದುರಾಯಿತು. ಗೆಲುವಿನ ದಡ ಸೇರಲು ಕಾರಣವಾಗಿದ್ದ ಪರೇಶ ಮೇಸ್ತ ಎರಡೇ ಪುಣ್ಯಸ್ಮರಣೆಯಲ್ಲಿ ಮರೆತಿದ್ದರು. ಈ ಬಳಿಕ ನ್ಯಾಯದ ಬಗ್ಗೆ ಪ್ರಕರಣದ ತನಿಖೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಕೆಲ ತಿಂಗಳ ಹಿಂದೆ ಸಿಬಿಐ ವರದಿಯನ್ನು ನ್ಯಾಯಲಯಕ್ಕೆ ನೀಡಿದಾಗಲೂ ಜಿಲ್ಲಾ ಉಸ್ತುವಾರಿ ಸಚವರು ಮುಖ್ಯಮಂತ್ರಿಗಳ ಹೊರತಾಗಿ ಒರ್ವ ಶಾಸಕರು ಈ ಬಗ್ಗೆ ಖಂಡನೆಯಾಗಲಿ, ಆ ಕುಟುಂಬದವರೊ0ದಿಗೆ ನಾವಿದ್ದೇವೆ ಎನ್ನುವ ಮಾತು ಆಡಲಿಲ್ಲ. ಇದನ್ನೆ ಕಾಂಗ್ರೇಸ್ ಅಸ್ತ್ರವಾಗಿಸಿಕೊಂಡಿದ್ದು, ಬಿಜೆಪಿಯ ವಿರುದ್ದ ತಿರುಗಿ ಬಿದ್ದಿದೆ. ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿದ್ದ ಪರೇಶ ಮೇಸ್ತ ಪ್ರಕರಣ ಇಂದು ಬಿಜೆಪಿಗೆ ಎದುರಾಗಿದೆ. ಅಂದು ಬಿಜೆಪಿ ಮಾತು ನಂಬಿದ್ದ ಪರೇಶ ಕುಟುಂಬ ನ್ಯಾಯ ಸಿಗುವುದು ಹುಸಿಯಾಗಿದ್ದು, ಮತ್ತೊಮ್ಮೆ ಮರುತನಿಖೆಗೆ ಮುಂದಾಗಿದೆ. ಈ ಬೆಳವಣೆಗೆಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಲಾಭ ನಷ್ಟವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.
ಅಂದು ಕಾಂಗ್ರೆಸ್ ಶಾರದಾ ಶೆಟ್ಟಿ, ಇಂದು ಬಿಜೆಪಿಯ ಅನಂತಕುಮಾರ್ ಟಾರ್ಗೆಟ್!
ಪರೇಶ ಮೇಸ್ತ ಪ್ರಕರಣಕ್ಕೆ ಸಂಭವಿಸಿದಾಗ ಅಂದಿನ ಶಾಸಕಿ ಶಾರದಾ ಶೆಟ್ಟಿ ಇದೊಂದು ಸಹಜ ಸಾವು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಪರೇಶ ಒಡನಾಡಿಗಳು ಆಕ್ರೋಶ ವ್ಯಕ್ತಪಡಿಸಿದರು. ಅದಲ್ಲದೇ ಈ ಹೇಳಿಕೆಯಿಂದಲೇ ಅಂದು ಶಾರದಾ ಶೆಟ್ಟಿ ಟಾರ್ಗೆಟ್ ಆಗಿದ್ದು ಚುನಾವಣೆಯಲ್ಲಿ ಸೋಲವಂತಾಗಿತ್ತು. ಸದ್ಯ ಈಗ ಪರೇಶ್ ಮೇಸ್ತಾ ಪ್ರಕರಣ ಸಿಬಿಐ ಬಿ ರಿಪೋರ್ಟ್ ಹಾಕಿದ ನಂತರ ಸಂಸದ ಅನಂತ್ ಕುಮಾರ್ ಹೆಗಡೆಯವರನ್ನ ಟಾರ್ಗೆಟ್ ಮಾಡಲು ಮುಂದಾಗಿದ್ದಾರೆ. ಐದು ವರ್ಷದ ಹಿಂದೆ ಘಟನೆ ನಡೆದ ವೇಳೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡುತ್ತೇವೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಸಂಸದರು ಯಾವ ನ್ಯಾಯ ಕೊಡಿಸಿದ್ದಾರೆ, ಕೇವಲ ಪ್ರಕರಣವನ್ನ ರಾಜಕೀಯ ಲಾಭ ಮಾಡಿಕೊಂಡಿದ್ದಾರೆ ಎನ್ನುವ ಆರೋಪವನ್ನ ಮಾಡಿ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ.