ಕಾರವಾರ: ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಕಟ್ಟಡಗಳಿಗೆ ಪರವಾನಗಿ ನೀಡುತ್ತಿದ್ದು, ಶ್ರೀಮಂತರಿಗೊOದು- ಬಡವರಿಗೊಂದು ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಾಯಿಕಟ್ಟಾದ ಅಚಲ ನಾಯ್ಕ ಎನ್ನುವವರು ಸರ್ವೆ ನಂಬರ್ 25 ಹಿಸ್ಸಾ 6ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪಕ್ಕದ ನಿವಾಸಿಗಳ ಜಾಗದ ಕಾಲು ದಾರಿಯನ್ನೇ 9 ಮೀ. ರಸ್ತೆ ಇದೆ ಎಂದು ನಕ್ಷೆಯಲ್ಲಿ ತೋರಿಸಿ, ನಗರಸಭೆ ಹಾಗೂ ಕೆಡಿಎದಿಂದ ಪರವಾನಗಿ ಪಡೆದಿದ್ದಾರೆ. ಈ ಬಗ್ಗೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ದಾರಿಯಿಲ್ಲದೇ ಕಟ್ಟಡ ನಿರ್ಮಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ಇಲಾಖೆಗಳಿಗೆ ಪರವಾನಗಿ ಪಡೆಯಲು ತಪ್ಪು ಮಾಹಿತಿ ನೀಡಿದ ಬಗ್ಗೆ ಸ್ಥಳೀಯ ನಿವಾಸಿಗಳು ಕೋರ್ಟ್ ಮೊರೆ ಹೋಗಿದ್ದು, ಪ್ರಕರಣದಲ್ಲಿ ಪರವಾನಗಿ ನೀಡಿದ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕಾಲು ದಾರಿಯನ್ನು ಬಳಸಿಕೊಳ್ಳದಂತೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.
ಹಲವು ಬಾರಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನ್ಯಾಯಕ್ಕಾಗಿ ನ್ಯಾಯಲಯದ ಮೊರೆ ಹೋಗುವ ಪರಿಸ್ಥಿತಿ ನಗರದಲ್ಲಿ ಉದ್ಭವವಾಗಿದೆ. ಇಲ್ಲಿ ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ ಎಂದು ಅವರು ದೂರಿದ್ದಾರೆ.
ಸ್ಥಳೀಯರಾದ ದಿನೇಶ ನಾಯ್ಕ, ಮೋಹನ್ ನಾಯ್ಕ, ನಾರಾಯಣ ನಾಯ್ಕ ಹಾಗೂ ಮಾದೇವ ನಾಯ್ಕ ಮುಂತಾದವರಿದ್ದರು.