ಕುಮಟಾ: ತಾಲೂಕಿನ ಶ್ರೀಕ್ಷೇತ್ರ ಗೋಕರ್ಣ ದೇವಾಲಯದ ಗರ್ಭಗುಡಿಯ ಪಕ್ಕದಲ್ಲೆ ಭಕ್ತರಿಗೆ ರಸೀದಿ ನೀಡದೆ ಪ್ರಸಾದ ನೀಡುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದ್ದು, ಈ ಸಂಬಂಧ ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ.
ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾದ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನವು ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದ ಮೇಲುಸ್ತುವಾರಿ ಸಮಿತಿಯಡಿ ದೇವಸ್ಥಾನದ ನಿರ್ವಹಣೆ ನಡೆಯುತ್ತಿದೆ. ಶ್ರೀ ಮಹಾಬಲೇಶ್ವರ ದರ್ಶನಕ್ಕೆ ಬರುವ ಭಕ್ತರಿಗೆ ವಿವಿಧ ಪೂಜಾ ಸೇವೆಗಳು ಸೇರಿದಂತೆ ಪ್ರಸಾದ ವ್ಯವಸ್ಥೆಯನ್ನು ರಸೀದಿ ಮೂಲಕ ಪಡೆಯಬಹುದಾಗಿದೆ. ಆದರೆ ಕೆಲ ಅರ್ಚಕರು ಗರ್ಭ ಗುಡಿಯ ಪಕ್ಕದಲ್ಲೆ ನಿಂತು ಭಕ್ತರಿಗೆ ಒತ್ತಾಯಪೂರ್ವಕವಾಗಿ ಪ್ರಸಾದ ರೂಪದಲ್ಲಿ ಕೆಲ ವಸ್ತುಗಳನ್ನು ನೀಡಿ, ಹಣ ಗಳಿಸುತ್ತಿದ್ದಾರೆ. ಈ ಪ್ರಸಾದಕ್ಕೆ ಆರೋಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲ. ಭಕ್ತರಿಗೆ ರಸೀದಿ ನೀಡಲ್ಲ. ಸುರಕ್ಷಾ ಮುದ್ರೆ ಇಲ್ಲ. ಸರ್ಕಾರಿ ಆಡಳಿತದ ಮೇಲುಸ್ತುವಾರಿ ಸಮಿತಿಯ ಅಧಿಕೃತ ಪರವಾನಗಿ ಪಡೆಯದೇ ಭಕ್ತರಿಂದ ಲಕ್ಷಾಂತರ ಹಣ ಗಳಿಕೆ ಮಾಡುವ ಮೂಲಕ ಧರ್ಮದ ಹೆಸರಿನಲ್ಲಿ ಅಧರ್ಮ ಮಾಡುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ನಾಗೇಶ ಸೂರಿ ಆರೋಪಿಸಿದ್ದಾರೆ.
ಅವರು ಈ ಸಂಬಂಧ ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಿ.ಎನ್.ಕೃಷ್ಣ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಲ್ಲದೇ ನಂದಿಯ ಮುಂದೆ ಪ್ರಸಾದದ ನೆಪದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ. ಭಕ್ತರು ಸಮರ್ಪಿಸುತ್ತಿರುವ ನಗ- ನಾಣ್ಯಗಳನ್ನು, ವಿಶೇಷವಾಗಿ ಬೆಳ್ಳಿ ಬಿಲ್ವ ಪತ್ರೆಗಳು, ಶಂಖ, ಹವಳ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಇಲ್ಲಿಯೇ ಸಮರ್ಪಣೆ ಮಾಡಿಸಿಕೊಳ್ಳಲಾಗುತ್ತಿದ್ದು, ಇದರ ಪಾರದರ್ಶಕತೆಯ ಮೇಲೆಯೂ ಈಗ ಭಕ್ತರಲ್ಲಿ ಸಂಶಯ ಮೂಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕರನ್ನೆಲ್ಲ ಒಗ್ಗೂಡಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ದೂರಿನಲ್ಲಿ ಎಚ್ಚರಿಸಿದ್ದಾರೆ.
ಗೋಕರ್ಣ ದೇಗುಲದಲ್ಲಿ ರಸೀದಿ ನೀಡದೆ ಅನಧಿಕೃತವಾಗಿ ಪ್ರಸಾದ ಮಾರಾಟ ಆರೋಪ
