ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅನೇಕ ಬಾರಿ ಒತ್ತಾಯಿಸಿದರೂ ಕೂಡ ಈವರೆಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಉ.ಕ ಜಿಲ್ಲಾ ಆಟೋ ಸಂಘದ ಪ್ರಧಾನ ವಿಶ್ವನಾಥ್ ಗೌಡ ಚಿಪಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸುಸಜ್ಜಿತ ಖಾಸಗಿ ಅಥವಾ ಸರಕಾರಿ ಆಸ್ಪತ್ರೆ ಇಲ್ಲದೇ ಸಾರ್ವಜನಿಕರು ಸರಿಯಾದ ಚಿಕಿತ್ಸೆ ಸಿಗದೇ ದೂರದ ಮಂಗಳೂರು, ಮಣಿಪಾಲ್, ಶಿಮೊಗ್ಗ, ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಮೃತರಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಬಗ್ಗೆ ಜಿಲ್ಲಾದ್ಯಂತ ಹೋರಾಟ ನಡೆದಿದ್ದರಿಂದ ಜನರ ಒತ್ತಾಯಕ್ಕೆ ಸರಕಾರವು ಮಣಿದು ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಕಾರ್ಮಿಕ ಸಚಿವರು ಉ.ಕ. ಜಿಲ್ಲೆಯ ಕುಮಟಾದಲ್ಲಿ ಆಸ್ಪತ್ರೆ ಮಂಜೂರು ಮಾಡಿರುವುದಾಗಿ ಹೇಳಿಕೆ ನೀಡಿದ್ದರು.
ಆದರೆ ಇತ್ತೀಚೆಗೆ ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ನೀಡಿ ಮಾಹಿತಿಯನ್ನು ಕೋರಿ ಪಡೆದುಕೊಂಡಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಆರೋಗ್ಯ ಇಲಾಖೆಯಿಂದ ಯಾವುದೇ ಪ್ರಸ್ತಾವನೆಯೇ ಸಲ್ಲಿಕೆಯಾಗದಿರುವುದು ತಿಳಿದುಬಂದಿದೆ.
ವಿವಿಧ ಸಂಘಟನೆಗಳು ಸೇರಿ ಈ ಹಿಂದೆಯೇ ಇದರ ಬಗ್ಗೆ ಶಿರಸಿಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರಮಾಣದ ಹೋರಾಟವನ್ನು ಮಾಡಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಲು ನಿರ್ಣಯ ಕೈಗೊಂಡಾಗ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಈಗ ಅಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲೆಯ ಜನರಿಗೆ ಪೊಳ್ಳು ಭರವಸೆ ನೀಡಿ ಇಲ್ಲಿಯವರೆಗೆ ಕಾಲಹರಣ ಮಾಡಿ ಬಂದಿದ್ದಾರೆ. ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎನ್ನುವ ಪರಿಸ್ಥಿತಿ ಇರುವುದರಿಂದ ಈ ತಿಂಗಳ ಕೊನೆಯ ವಾರದಲ್ಲಿ ಇನ್ನಿತರ ಹಲವು ಸಂಘಟನೆಗಳು ಸೇರಿ ಪಕ್ಷಾತೀತವಾಗಿ ಅನಿರ್ಧಿಷ್ಟಾವದಿಯ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿರುತ್ತೇವೆ ಎಂದು ಹೇಳಿದರು.
ಉಪವಾಸ ಸತ್ಯಾಗ್ರಹದ ದಿನಾಂಕವನ್ನು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಲಾಗುವುದು ಮತ್ತು ಈ ಹೋರಾಟದಲ್ಲಿ ಶಿರಸಿಯ ಎಲ್ಲ ಸಂಘಟನೆಗಳು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಅಧಿಕೃತ ಆದೇಶ ಸಿಗುವವರೆಗೆ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವೇಳೆ ರೆಡ್ ಆಂಟ್ ಗ್ರೂಪ್ ಅಧ್ಯಕ್ಷ ಮಹೇಶ್ ನಾಯ್ಕ್ ಮರಾಠಿಕೊಪ್ಪ, ಚೆಲುವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಾದೇವ ಚೆಲುವದಿ ಉಪಸ್ಥಿತರಿದ್ದರು.